ಬಹರೈನ್ ಅನಿವಾಸಿ ಕನ್ನಡಿಗರ ವೇದಿಕೆ ನೇತೃತ್ವದಲ್ಲಿ ಉಡುಪಿ ಡಿಸಿಯನ್ನು ಭೇಟಿ
ಬಹರೈನ್ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ

ಉಡುಪಿ: ಬಹರೈನ್ ಅನಿವಾಸಿ ಕನ್ನಡಿಗರ ವೇದಿಕೆಯ ಅಧ್ಯಕ್ಷರಾದ ರಾಜ್ ಕುಮಾರ್ ರವರ ನೇತೃತ್ವ ನಿಯೋಗವು ಶನಿವಾರ ಉಡುಪಿಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರನ್ನು ಭೇಟಿಯಾಗಿ ಬಹರೈನ್ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಸಮಸ್ಯೆಗಳ ವಿವರಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಿತು.
ಬಹರೈನ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪಡೆಯಲು ಮುಂದಾದರೆ ಕಾಲೇಜುಗಳ ಶುಲ್ಕ ಅಧಿಕವಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಈ ಸಮಸ್ಯೆಯನ್ನು ಸರಕಾರದ ಮುಂದೆ ತಂದು ಈ ಬಗ್ಗೆ ಮನವರಿಕೆ ಮಾಡಿಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಅವಕಾಶ ನೀಡಬೇಕೆದು ಆಗ್ರಹಿಸಿದರು.
ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದು, ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದ ಆನಿವಾಸಿ, ಕಾರಣಾಂತರಗಳಿಂದ ಉದ್ಯೋಗ ಕಳೆದುಕೊಂಡು ಅಥವಾ ಕಾರಣಾಂತರಗಿಳಿಂದ ತವರಿಗೆ ವಾಪಾಸ್ ಆದರೆ ಅಂತಹ ಅನಿವಾಸಿ ಕನ್ನಡಿಗರಿಗೆ ಜೀವನ ನಡೆಸಲು ಸೂಕ್ತವಾದ ರೀತಿಯಲ್ಲಿ ಸರಕಾರ ಸಹಾಯಹಸ್ತ ನೀಡಬೇಕು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳೂರು, ಉಡುಪಿ ಮೂಲದವರೆಂದು ತಿಳಿದ ಕೂಡಲೇ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ವಿನಾ ಕಾರಣ ಪ್ರವಾಸಿಗರನ್ನು ಸತಾಯಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ವಿಮಾನ ನಿಲ್ದಾಣದ ಅಧೀಕ್ಷರ ಗಮನಕ್ಕೆ ತಂದು ಅನಿವಾಸಿ ಕನ್ನಡಿಗರಿಗೆ ವಿಮಾನ ನಿಲ್ದಾಣದಲ್ಲಿ ಯಾವುದೇ ತೊಂದರೆ ಗಳಾಗದಂತೆ ಸೂಕ್ತ ಕ್ರಮವಹಿಸಬೇಕು. ಮತ್ತು ಹಬ್ಬ ಹಾಗೂ ರಜಾ ದಿನಗಳಲ್ಲಿ ಊರಿಗೆ ಬರುವ ಕನ್ನಡಿಗರಿಗೆ ವಿಮಾನ ಯಾನ ಟಿಕೆಟ್ ದರವನ್ನು ವಿಪರೀತ ಏರಿಸಲಾಗುತ್ತಿದೆ. ಈ ಬಗ್ಗೆಯೂ ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳ ಗಮನಕ್ಕೆ ತಂದು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿಯೋಗವು ಜಿಲ್ಲಾಧಿಕಾರಿ ಮನವಿ ಸಲ್ಲಿಸಿ ಆಗ್ರಹಿಸಿತು.
ನಿಯೋಗದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸುಮಾರು ಮೂವತ್ತು ನಿಮಿಷಗಳ ಕಾಲ ನಿಯೋಗದೊಂದಿಗೆ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ತನ್ನಿಂದಾದ ಸಹಾಯವನ್ನು ನೀಡುವ ಬಗ್ಗೆ ಭರವಸೆ ನೀಡಿದರು.
ನಿಯೋಗದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟೀ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬಹರೈನ್ ಕನ್ನಡಿಗರಾದ ಆಸ್ಟಿನ್ ಸಂತೋಷ್, ರಾಜೇಶ್ ಬಿ. ಶೆಟ್ಟಿ, ಸಂಜೀವ ಶೆಟ್ಟಿ ಹಾಗೂ ಉದಯ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.