ರೋಟರಾಕ್ಟ್ ರಸ ಪ್ರಶ್ನೆ ಸ್ಪರ್ಧೆ: ಮಂಗಳೂರು ಸಿಟಿ ಪ್ರಥಮ

ಮಂಗಳೂರು: ಜಿಲ್ಲಾ ರೋಟರಾಕ್ಟ್ ಸಂಸ್ಥೆ ಮತ್ತು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರೋಟರಾಕ್ಟ್ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ದಿವಂಗತ ಶಾಂತಾರಾಮ್ ವಾಮಂಜೂರು ಸ್ಮಾರಕ ೧೯ನೇ ವಾರ್ಷಿಕ ರಾಜ್ಯಮಟ್ಟದ ಅಂತರ್‌ಕ್ಲಬ್ ರೋಟರಾಕ್ಟ್ ರಸಪ್ರಶ್ನೆ ಸ್ಪರ್ಧಾಕೂಟವು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯನ್ನು ಪ್ರತಿನಿಧಿಸಿದ ಸಾತ್ವಿಕ್ ಕೊಟೆಕಾರ್ ಮತ್ತು ಶಮನ್ ತಂಡವು ಪ್ರಥಮ ಸ್ಥಾನ ಗಳಿಸಿತು. ರೋಟರಾಕ್ಟ್ ಕ್ಲಬ್ ವನಚೈತನ್ಯ, ಬೆಂಗಳೂರು ಸಂಸ್ಥೆಯನ್ನು ಪ್ರತಿನಿಧಿಸಿದ ಶ್ರೀಖರ್ ದ್ವಿತೀಯ ಸ್ಥಾನ ಪಡೆದರು.
ಖ್ಯಾತ ತುಳು ಚಲನಚಿತ್ರ ನಟ ಬೋಜರಾಜ ವಾಮಂಜೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ದಿವಂಗತ ಸಹೋದರ ಶಾಂತಾರಾಮ್ ವಾಮಂಜೂರು ಸ್ಮರಣಾರ್ಥ ವರ್ಷಂಪ್ರತಿ ಈ ಸ್ಪರ್ಧಾಕೂಟ ವನ್ನು ಆಯೋಜಿಸುವ ರೋಟರಾಕ್ಟ್ ಸಂಸ್ಥೆಯ ನಿಸ್ವಾರ್ಥ ಸಮಾಜಸೇವಾ ಕಾರ್ಯ ಶ್ಲಾಘನೀಯ ಎಂದರು.
ಅಂತರ್‌ರಾಷ್ಟ್ರೀಯ ರೋಟರಾಕ್ಟ್ ಸಂಸ್ಥೆಯ ಮಾಜಿ ಅಧ್ಯಕ್ಷ , ಗುಂಟೂರು ನಗರ ಮೂಲದ ರವಿ ವಡ್ಲಮಣಿಯವರು ಗೌರವ ಅತಿಥಿಯಾಗಿ ಪಾಲ್ಗೊಂಡು,ರೋಟರಾಕ್ಟ್ ಸ್ಪರ್ಧಾ ವಿಜೇತರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ರೋಟರಾಕ್ಟ್ ಜಿಲ್ಲಾ ಚುನಾಯಿತ ಪ್ರತಿನಿಧಿ ಮೈಸೂರು ನಗರ ಮೂಲದ ಪ್ರಜ್ವಲ್, ರೋಟರಾಕ್ಟ್ ದಕ್ಷಿಣ ಏಶ್ಯ ಸಂಸ್ಥೆಯ ಅಧ್ಯಕ್ಷ ಡೇರಿಲ್ ಡಿ ಸೋಜ, ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಚುನಾಯಿತ ಅಧ್ಯಕ್ಷ ಭಾಸ್ಕರ್ ರೈ, ವಾಣಿ ವಾಮಂಜೂರ್ ಉಪಸ್ಥಿತರಿದ್ದರು.
ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಟ್ಟದ 10 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿದ್ದವು. ಈ ಸ್ಪರ್ಧಾಕೂಟವನ್ನು ರೋಟರಾಕ್ಟ್ ಮಂಗಳೂರು ಸಿಟಿ ಸಂಸ್ಥೆಯ ಸಭಾಪತಿ ಡಾ. ದೇವದಾಸ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಕ್ಷಯ್ ರೈ ವಂದಿಸಿದರು.







