ದಿ. ವಿ.ಎಸ್. ಕುಡ್ವರ ಜನ್ಮ ದಿನಾಚರಣೆ

ಮಂಗಳೂರು: ಖ್ಯಾತ ಪತ್ರಿಕೋದ್ಯಮಿ ನವಭಾರತ ಕನ್ನಡ ದೈನಿಕ ಪತ್ರಿಕೆಯ ಸ್ಥಾಪನಾ ಸಂಪಾದಕ ಮತ್ತು ಕೆನರಾ ವರ್ಕ್ಸ್‌ಶಾಪ್ ಕೈಗಾರಿಕಾ ಸಂಸ್ಥೆಯ ಸ್ಥಾಪನಾಧ್ಯಕ್ಷ ದಿವಂಗತ ವಿ. ಎಸ್. ಕುಡ್ವರ 126ನೇ ವಾರ್ಷಿಕ ಜನ್ಮ ದಿನಾಚರಣೆ (ಸಂಸ್ಥಾಪಕರ ದಿನಾಚರಣೆ) ಕೆನರಾ ವರ್ಕ್‌ಶಾಪ್ ಸಂಸ್ಥೆಯ ಕೈಗಾರಿಕಾ ಸಂಕೀರ್ಣದಲ್ಲಿ ಸೋಮವಾರ ಜರುಗಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರೇಮನಾಥ ಕುಡ್ವ ಅವರು ದಿ. ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಿದರು.
ಸ್ಥಾಪಕರ ಆಡಳಿತ ಕ್ಷಮತೆ, ಕಾರ್ಯದಕ್ಷತೆ, ಕಾರ್ಯನಿರ್ವಾಹಣೆ, ಕರ್ತವ್ಯ ನಿಷ್ಠೆ ಮತ್ತು ಸಮಯ ಪಾಲನೆ ಮತ್ತು ಪತ್ರಿಕೋದ್ಯಮ ಹಾಗೂ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸಾಧನೆಯನ್ನು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ಉಪಮಹಾಪ್ರಬಂಧಕ ಅಬ್ದುಲ್ ಸಲೀಂ ಅವರು ಮುಖ್ಯ ಅತಿಥಿಯಾಗಿದ್ದರು.
ದಿ ವಿ.ಎಸ್. ಕುಡ್ವರ ಜೀವನ ಚರಿತ್ರೆ ಕೃತಿಯ ಲೇಖಕ ವಸಂತ ಮಲ್ಯರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಿಬ್ಬಂದಿಯ ಪರವಾಗಿ ಸಹಾಯಕ ಮಹಾಪ್ರಬಂಧಕ ಅಕ್ಷಯ್ ಪ್ರಭು , ಉದ್ಯಮಿ ಗುರುಪ್ರಸಾದ್, ಮನೋಹರ್ ಕಿಣಿ, ಗಣೇಶ್ ಕಾಮತ್, ಹಿರಿಯ
ಕಾರ್ಮಿಕರಾದ ಸುರೇಶ್ ಸಾಲಿಯಾನ್ ಮತ್ತು ಜಯಂತ್ ಬಂಗೇರಾ, ಕಾರ್ಮಿಕರ ಸಂಘದ ಪರವಾಗಿ ಶರತ್, ರವೀಂದ್ರ, ಭಾಸ್ಕರ್ ಆಚಾರ್ಯ ಸಂಸ್ಥಾಪಕರ ಪುತ್ಥಳಿಗೆ ಹಾರಾರ್ಪಣೆ ಮಾಡಿ ತಮ್ಮ ಗೌರವ ಸಲ್ಲಿಸಿದರು.
ಸಂಸ್ಥೆಯ ಮಹಿಳಾ ಅಧಿಕಾರಿ ಕಿರಣ್ ಎಸ್. ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ್ ಕಿಣಿ ವಂದಿಸಿದರು.