ಜೈನ ಬಸದಿಗಳ ಅರ್ಚಕರಿಗೆ ಗೌರವಧನ: ಸರಕಾರದ ಆದೇಶ ಜಾರಿ

ಮಂಗಳೂರು, ಜೂ.9: ರಾಜ್ಯದಲ್ಲಿ ಜೈನ ಸಮುದಾಯದ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಗಳಿಗೆ ಮತ್ತು ಸಹಾಯಕ ಅರ್ಚಕರಿಗೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಅನುಷ್ಠಾನ ಗೊಳಿಸಲು ಸರಕಾರ ಮಂಜೂರಾತಿ ನೀಡಿ ಆದೇಶಿಸಿದೆ.
2025-26ನೇ ಆಯವ್ಯಯ ಭಾಷಣ ಕಂಡಿಕೆ -229ರಲ್ಲಿ ಘೋಷಿಸಿರುವಂತೆ ಜೈನ ಸಮುದಾಯದ ಅರ್ಚಕರಿಗೆ ಗೌರವ ಧನ ನೀಡಲು , ಸಿಖ್ ಮುಖ್ಯ ಗ್ರಂಥಿಗಳು ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವ ಧನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೆಜ್ಜೆ ಇರಿಸಿದೆ.
ಜೈನ ಸಮುದಾಯದ ಅರ್ಚಕರಿಗೆ ಮಾಸಿಕ ಗೌರವ ಧನ 6 ಸಾವಿರ ರೂ ಮತ್ತು ಸಹಾಯಕ ಅರ್ಚಕರು ಮಾಸಿಕ 5 ಸಾವಿರ ರೂ. ಗೌರವ ಧನ ಪಡೆಯಲಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಎಜಾಸ್ ಪಾಷ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಈಗಾಗಲೇ ರಾಜ್ಯದಲ್ಲಿನ ನೋಂದಾಯಿತ ಸಿಖ್ ಗುರುದ್ವಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಗ್ರಂಥಿಗಳಿಗೆ ನೀಡಲಾಗುತ್ತಿರುವ ಗೌರವ ಧನ 4,000 ರೂ.ಗಳನ್ನು 6 ಸಾವಿರ ರೂ.ಗಳಿಗೆ ಮತ್ತು ಮೀತ್ /ರಾಗಿ (ಸಹಾಯಕ) ಗ್ರಂಥಿಗಳಿಗೆ ಮಾಸಿಕ ಗೌರವಧನವನ್ನು 3ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಏರಿಸಲಾಗಿದೆ.
ಈ ಯೋಜನೆಗಳಿಗೆ ತಗಲುವ ವೆಚ್ಚವನ್ನು ಜೈನ್, ಬೌದ್ಧ ಮತ್ತು ಸಿಖ್ ಸಮುದಾಯದ ಅಭಿವೃದ್ಧಿ ರಾಜ್ಯ ವಲಯ ಯೋಜನೆಯಡಿ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಭರಿಸುವಂತೆ ಅಲ್ಪ ಸರಕಾರ ಆದೇಶಿಸಿದೆ.
ಜೈನ್ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಮಾಸಿಕ ಗೌರವ ಧನ ನೀಡಲು ಸರಕಾರ ಮಾರ್ಗಸೂಚಿಯನ್ನು ನಿಗದಿಪಡಿಸಿದೆ.
ಈ ರೀತಿ ಗೌರವ ಧನ ಪಡೆಯಲು ಅರ್ಚಕರು ಮತ್ತು ಸಹಾಯಕ ಅರ್ಚಕರು ತಾವು ಸೇವೆ ಸಲ್ಲಿಸುತ್ತಿರುವ ಜೈನ್ ಬಸದಿಗಳು ಕರ್ನಾಟಕ ರಾಜ್ಯದಲ್ಲಿನ ಸಂಘಗಳ ನೋಂದಣಿ ಕಾಯ್ದೆ 1960 ಅಥವಾ ಟ್ರಸ್ಟ್ ಕಾಯ್ದೆಯನ್ವಯ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು. ಆಯಾ ಬಸದಿಯ ಆಡಳಿತ ಮಂಡಳಿಯು ತಮ್ಮಲ್ಲಿನ ಪ್ರಧಾನ ಅರ್ಚಕರು ಹಾಗೂ ಸಹಾಯಕ ಅರ್ಚಕರನ್ನು ಆಯ್ಕೆ ಮಾಡಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗೆ ಸಲ್ಲಿಸಬೇಕಾಗಿದೆ.
ಅರ್ಚಕರು ಅರ್ಜಿ ಸಲ್ಲಿಸುವಾಗ ಅರ್ಜಿಯೊಂದಿಗೆ ತಮ್ಮ ಭಾವಚಿತ್ರ, ಮೂರು ವರ್ಷಗಳಲ್ಲಿ ವಾಸವಿರುವ ಬಗ್ಗೆ ದಾಖಲೆ, ಆಧಾರ ಕಾರ್ಡ್ ಪ್ರತಿ, ಅರ್ಚಕರುಗಳ ಮಾಹೆಯಾನ ಕರ್ತವ್ಯದ ಹಾಜರಾತಿ ದೃಢೀಕರಣ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿದೆ.
ಜಿಲ್ಲಾ ಕಚೇರಿಯಿಂದ ಅಲ್ಪ ಸಂಖ್ಯಾತರ ನಿರ್ದೇಶನಾಲಯಕ್ಕೆ ಸೂಕ್ತ ಶಿಫಾರಸ್ಸಿನೊಂದಿಗೆ ಅರ್ಜಿಗಳನ್ನು ಸಲ್ಲಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಅರ್ಚಕರುಗಳಿಗೆ ನೀಡುವ ಗೌರವಧನವನ್ನು ಅನುದಾನದ ಲಭ್ಯತೆಯನುಸಾರ ಬಿಡುಗಡೆ ಮಾಡಲಾಗುವು ದರಿಂದ ಗೌರವಧನದ ಹಕ್ಕನ್ನು ಸಂಬಂಧಪಟ್ಟ ಅರ್ಚಕರು ಸ್ಥಾಪಿಸತಕ್ಕದ್ದಲ್ಲ. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿಗಳು ಅರ್ಚಕರುಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಿಂಗಳ ಗೌರವ ಧನವನ್ನು ಪಾವತಿಸಲಿರುವರು. ಅರ್ಚಕರುಗಳು ಅವರ ಹುದ್ದೆಗೆ ಸಂಬಂಧಪಟ್ಟ ಧಾರ್ಮಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಬಸದಿಯ ಅರ್ಚಕರು ಬದಲಾದಲ್ಲಿ ಹೊಸ ಅರ್ಜಿಯೊಂದಿಗೆ ಪರಿಷ್ಕೃತ ಪ್ರಸ್ತಾವನೆಯನ್ನು ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಅರ್ಚಕರುಗಳನ್ನು ಸರಕಾರಿ ನೌಕರರೆಂದು ಪರಿಗಣಿಸುವಂತಿಲ್ಲ ಹಾಗೂ ಯಾವುದೇ ತರಹದ ಸೇವಾ ಕೃಪಾಂಕಕ್ಕೆ ಅರ್ಹರಿರುವುದಿಲ್ಲ ಎಂದು ಕೆಲವು ಷರತ್ತುಗಳನ್ನು ವಿಧಿಸಿ ಕರ್ನಾಟಕ ಸರಕಾರ ಸೋಮವಾರ ಆದೇಶ ಹೊರಡಿಸಿದೆ.