ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮಾಜಿ ಮೇಯರ್ ಅಶ್ರಫ್ಗೆ ಎರಡನೆ ನೋಟಿಸ್
► ಪಕ್ಷ ವಿರೋಧಿ ಚಟುವಟಿಕೆಯ ಆರೋಪ

ಶಾಹುಲ್ ಹಮೀದ್ - ಅಶ್ರಫ್
ಮಂಗಳೂರು: ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇರೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಮಾಜಿ ಮೇಯರ್ ಅಶ್ರಫ್ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಎರಡನೆ ಬಾರಿಗೆ ನೋಟಿಸ್ ಜಾರಿಗೊಳಿಸಿದೆ.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ರಿಂದ ನಿರ್ದೇಶಿತರಾಗಿದ್ದ ಪ್ರಧಾನ ಕಾರ್ಯದರ್ಶಿ (ಆಡಳಿತ) ಟಿ.ಡಿ. ವಿಕಾಸ್ ಶೆಟ್ಟಿ ಮೇ 31ರಂದು ಇಬ್ಬರಿಗೆ ನೋಟಿಸ್ ಜಾರಿಗೊಳಿಸಿ 7 ದಿನದೊಳಗೆ ಉತ್ತರಿಸಲು ತಿಳಿಸಿದ್ದರು. ಆದರೆ, ಇಬ್ಬರೂ ಕೂಡ ನೋಟಿಸ್ಗೆ ಉತ್ತರಿಸಿರಲಿಲ್ಲ. ಸೋಮವಾರ ಮತ್ತೆ ನೋಟಿಸ್ ಜಾರಿಗೊಳಿಸಿದ ವಿಕಾಸ್ ಶೆಟ್ಟಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಹಿನ್ನೆಲೆಯಲ್ಲಿ ಕಾರಣ ಕೇಳಿ ನೀಡಿದ ನೋಟಿಸ್ಗೆ ಉತ್ತರಿಸಲು 7 ದಿನದ ಕಾಲಾವಕಾಶ ನೀಡಲಾಗಿತ್ತು. ಆದರೆ ತಾವು ಈ ನೋಟಿಸ್ಗೆ ಈವರೆಗೆ ಉತ್ತರಿಸಲಿಲ್ಲ. ಅಲ್ಲದೆ ಈ ನೋಟಿಸನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ ಪ್ರಶ್ನೆ ಮಾಡಿರುತ್ತೀರಿ. ಇದರಿಂದ ನೀವು ಮತ್ತಷ್ಟು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತದೆ. ನೋಟಿಸ್ಗೆ ಉತ್ತರಿಸಲು ತಮಗೆ ಮತ್ತೆ 5 ದಿನದ ಕಾಲಾವಕಾಶ ನೀಡಲಾಗುವುದು. ಇದಕ್ಕೂ ಯಾವುದೇ ಪ್ರತಿಕ್ರಿಯೆ ಇಲ್ಲವಾದಲ್ಲಿ ಈ ನೋಟಿಸ್ಗೆ ತಮ್ಮ ಸಮ್ಮತಿ ಇದೆ ಎಂದು ಭಾವಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಮೂಲವೊಂದರ ಪ್ರಕಾರ ಇತ್ತೀಚೆಗೆ ಕೆಪಿಸಿಸಿಯಿಂದ ನಿಯುಕ್ತಿಗೊಂಡ ರಾಜ್ಯ ಸಭಾ ಸದಸ್ಯ ನಾಸಿರ್ ಹುಸೈನ್ ನೇತೃತ್ವದ ಅವಲೋಕನಾ ತಂಡದ ಸದಸ್ಯರು ಮತ್ತು ಮುಖ್ಯಮಂತ್ರಿಯ ವಿಶೇಷ ಸೂಚನೆಯ ಮೇರೆಗೆ ಆಗಮಿಸಿದ್ದ ಬಿ.ಕೆ. ಹರಿಪ್ರಸಾದ್ ಈ ನೋಟಿಸ್ಗೆ ಉತ್ತರಿಸಲು ಹೋಗಬೇಡಿ. ಕೆಪಿಸಿಸಿ ಮತ್ತು ಡಿಸಿಸಿ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದರು ಎನ್ನಲಾಗಿದೆ. ಆದಾಗ್ಯೂ ಎರಡನೇ ಬಾರಿಗೆ ಶಾಹುಲ್ ಹಮೀದ್ ಮತ್ತು ಅಶ್ರಫ್ಗೆ ನೋಟಿಸ್ ಜಾರಿಗೊಳಿಸಿರುವುದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.