ಅಶ್ರಫ್, ಅಬ್ದುಲ್ ರಹ್ಮಾನ್ ಹತ್ಯೆಯನ್ನೂ ಎನ್ಐಎಗೆ ವಹಿಸಲು ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಆಗ್ರಹ

ಅಶ್ರಫ್ ವಯನಾಡ್ - ಅಬ್ದುಲ್ ರಹ್ಮಾನ್
ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯನ್ನು ಎನ್ಐಎಗೆ ವಹಿಸುವುದಾದರೆ ಗುಂಪು ಹತ್ಯೆ ಹೆಸರಿನಲ್ಲಿ ಹಿಂದುತ್ವವಾದಿಗಳು ಕುಡುಪುವಿನಲ್ಲಿ ಕೊಂದ ಅಶ್ರಫ್ ವಯನಾಡ್, ಅಬ್ದುಲ್ ರಹಿಮಾನ್ ಕೊಳತ್ತಮಜಲು ಅವರ ಹತ್ಯೆಯ ತನಿಖೆಯನ್ನೂ ಎನ್ಐಎಗೆ ವಹಿಸಬೇಕೆಂದು ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ ಆಗ್ರಹಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ಅವರು, ಈ ಹಿಂದೆ ಕೊಲೆಯಾದ ಮಸೂದ್, ಫಾಝಿಲ್, ಜಲೀಲ್, ಅಶ್ರಫ್ ಅವರ ಹತ್ಯೆ ಮಾಡಿರುವವರು ಈಗಾಗಲೇ ಜಾಮೀನು ಪಡೆದು ರಾಜಾರೋಷವಾಗಿ ಹೊರಗಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಧರ್ಮಾಧಾರಿತ ತಾರತಮ್ಯ ಕೊನೆಯಾಗಬೇಕು. ಕೊಲೆ ಕೃತ್ಯದಲ್ಲಿ ಭಾಗಿಯಾ ಗಿರುವವರ ಜೊತೆಗೆ ಅವರ ಹಿಂದಿನ ಕೈಗಳನ್ನು ಬಯಲು ಮಾಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಗುಂಪು ಹತ್ಯೆ ಹೆಸರಿನಲ್ಲಿ ಹಿಂದುತ್ವವಾದಿಗಳು ಕುಡುಪುವಿನಲ್ಲಿ ಥಳಿಸಿ ಕೊಂದ ಅಮಾಯಕ ಅಶ್ರಫ್ ವಯನಾಡ್ ಮತ್ತು ಅಬ್ದುಲ್ ರಹಿಮಾನ್ ಕೊಳತ್ತಮಜಲು ಅವರ ಹತ್ಯೆಯ ತನಿಖೆಯನ್ನೂ ಎನ್ಐಎಗೆ ವಹಿಸಲು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವ ದೇಶದಲ್ಲಿ ಜಾತಿ ಧರ್ಮಗಳ ಹೆಸರಿನಲ್ಲಿ ನಡೆಯುವ ಕೊಲೆಗಳು ಅಂತ್ಯವಾಗಬೇಕು. ಹಾಗಾಗಿ ಕೇಂದ್ರ ಸರಕಾರ ಬಿಜೆಪಿ ಸರಕಾರವೇ ರೌಡಿ ಶೀಟರ್ ಪಟ್ಟ ನೀಡಿದ್ದ ಎರಡು ಕೊಲೆಗಳು ಸಹಿತ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸುವುದಾದರೆ, ಯಾವುದೇ ತಪ್ಪು ಮಾಡದೇ ಕೇವಲ ಮುಸ್ಲಿಂ ಎಂಬ ಕಾರಣಕ್ಕಾಗಿ ಬರ್ಬರವಾಗಿ ಸಂಘಪರಿವಾರದ ಗೂಂಡಾಗಳಿಂದ ಹತ್ಯೆಗೀಡಾಗಿದ್ದ ಅಶ್ರಫ್ ವಯನಾಡ್, ಅಬ್ದುಲ್ ರಹಿಮಾನ್ ಕೊಳತ್ತಮಜಲು ಅವರ ಪ್ರಕರಣವನ್ನು ಎನ್ಐಎಗೆ ವಹಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಅವರು ರಾಜ್ಯ ಸರಕಾರವನ್ನು ಪ್ರಶ್ನೆಮಾಡಿದ್ದಾರೆ.
ಓರ್ವ ರೌಡಿ ಶಿಟರ್ನ ಕೊಲೆಯನ್ನು ಎನ್ಐಎ ಗೆ ವಹಿಸಲು ಸಾಧ್ಯವಾಗಿರುವಾಗ ಅಮಾಯಕರಾದ ಅಶ್ರಫ್ ವಯನಾಡ್, ಅಬ್ದುಲ್ ರಹಿಮಾನ್ ಕೊಳತ್ತಮಜಲು ಅವರ ಕೊಲೆಯನ್ನೂ ಎನ್ಐಎಗೆ ವಹಿಸಬೇಕು ಮತ್ತು ಈ ಧರ್ಮಾಧಾರಿತ ಕೊಲೆಗಳ ಹಿಂದಿನ ಶಕ್ತಿಗಳನ್ನೂ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಮೂಲಕ ಕೊಲೆಗೈಯ್ಯುವ ಮತ್ತು ಅವರಿಗೆ ಕುಮ್ಮಕ್ಕು ನೀಡುವವರಿಗೆ ಎಚ್ಚರಿಕೆ ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.