ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಮಟ್ಟದ ನಿಯೋಗ ಪೊಲೀಸ್ ಇಲಾಖೆ, ಜಿಲ್ಲಾಡಳಿತವನ್ನು ಬೆದರಿಸಿ ಹೋಗಿದೆ: ಮುನೀರ್ ಕಾಟಿಪಳ್ಳ

ಮುನೀರ್ ಕಾಟಿಪಳ್ಳ
ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಮಟ್ಟದ ನಿಯೋಗ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತ ವನ್ನು ಅಕ್ಷರಶಃ ಬೆದರಿಸಿ ಹೋಗಿದೆ. ಅದರಲ್ಲೂ ಕೋಮು ಶಕ್ತಿಗಳನ್ನು ನಿಯಂತ್ರಿಸಲು ಹೊರಟಿರುವ ಜಿಲ್ಲೆಯ ನೂತನ ಎಸ್ ಪಿ ಅರುಣ್ ಕುಮಾರ್, ನಗರ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಅದು ಎಂತಹದ್ದೇ ನಟೋರಿಯಸ್ ಗಳು ಆಗಿದ್ದರೂ ಸರಿ "ನಮ್ಮವರ ತಂಟೆಗೆ ಬಂದರೆ ಜೋಕೆ" ಎಂದು ಅವರ ಕಚೇರಿಗಳಿಗೆ ತೆರಳಿ ಧಮ್ಕಿ ಮಾದರಿಯಲ್ಲಿ ಬೆದರಿಸಿ ಬಂದಿದ್ದಾರೆ. ಮಾದ್ಯಮಗೋಷ್ಟಿಯಲ್ಲೂ ಗೂಂಡಾಗಿರಿಯ ಭಾಷೆಯಲ್ಲೆ ಬೆದರಿಕೆ ಹಾಕಿದ್ದಾರೆ, ಇದು ತೀರಾ ಖಂಡನೀಯ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ, ಡಜನ್ ಗಟ್ಟಲೆ ಶಾಸಕರು, ಸಂಸದರುಗಳನ್ನು ಒಳಗೊಂಡ ನಿಯೋಗ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಹೀಗೆ ತೀರಾ ಗೂಂಡಾಗಿರಿಯ ರೀತಿ ನಡೆದುಕೊಳ್ಳುವುದು, ಅವರ ಕಚೇರಿಗಳಿಗೆ ಸಿನೆಮಾ ಶೈಲಿಯಲ್ಲಿ ಗುಂಪಾಗಿ ನುಗ್ಗುವುದು ಅನಾಗರಿಕ ನಡೆ. ಇದು ಈಗಾಗಲೆ ಘನತೆ ಕಳೆದುಕೊಂಡಿರುವ ಕರಾವಳಿಯ ರಾಜಕಾರಣವನ್ನು ಮತ್ತಷ್ಟು ಅಧಃಪತನಕ್ಕೆ ತಳ್ಳಲಿದೆ. ಬಿಜೆಪಿಯ ಈ ಗೂಂಡಾಗಿರಿಯನ್ನು ಜಿಲ್ಲೆಯ ಜನಪರ ಚಳವಳಿಗಳು ಒಂದಾಗಿ ಎದುರಿಸಲಿದೆ ಎಂದು ಹೇಳಿದರು.
ವಿರೋಧ ಪಕ್ಷದ ಈ ಅತಿರೇಕದ ನಡೆ, ಪೊಲೀಸ್ ವರಿಷ್ಟರ ಮೇಲಿನ ದಬ್ಬಾಳಿಕೆಯನ್ನು ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕತ್ವ ಎದುರಿಸಲು ಯತ್ನಿಸದಿರುವುದು, ಬಿಗು ಕ್ರಮಗಳಿಗೆ ಮುಂದಾಗಿರುವ ಪೊಲೀಸ್ ಅಧಿಕಾರಿಗಳಿಗೆ ಬೆಂಬಲವಾಗಿ ನಿಲ್ಲದಿರುವುದು ಅಷ್ಟೆ ವಿಷಾದನೀಯ. ಸಿಪಿಐಎಂ ಪಕ್ಷವು ಕೋಮುವಾದಿ ಶಕ್ತಿಗಳ ವಿರುದ್ಧದ ಪೊಲೀಸರ ಕ್ರಮವನ್ನು ಬೆಂಬಲಿಸಲಿದೆ. ಬಿಜೆಪಿಯ ದಬ್ಬಾಳಿಕೆಯ ವಿರುದ್ಧ ಜನಾಭಿಪ್ರಾಯ ಕ್ರೋಢೀಕರಿಸಲಿದೆ. ಅದಲ್ಲದೆ, ಪಾಕಿಸ್ತಾನದ ಜೊತೆಗೆ ಕೇರಳವನ್ನು ಹೋಲಿಸುವ ರೀತಿ ಮಾತಾಡಿರುವ ವಿರೋಧ ಪಕ್ಷದ ನಾಯಕ ಅಶೋಕ್ ಅವರ ಕೊಳಕು ಮನಸ್ಥಿತಿಯನ್ನು ಬಲವಾಗಿ ಖಂಡಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.