ಸಂಭಾವ್ಯ ಮಳೆ ಅನಾಹುತ ಪ್ರದೇಶಗಳನ್ನು ಗುರುತಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಜೂ.10: ಜಿಲ್ಲೆಯ ಎಲ್ಲಾ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಗಳಿಂದ ಅಪಾಯದ ಸಾಧ್ಯತೆ ಇರುವ ಪ್ರದೇಶಗಳನ್ನು ಮುಂದಿನ ಎರಡು ದಿನಗಳಲ್ಲಿ ಗುರುತಿಸಿ ವರದಿ ನೀಡಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಕುಸಿತ, ನೀರು ಮುಳುಗಡೆ ಸಹಿತ ತೀವ್ರ ಮಳೆಯಿಂದಾಗಿ ದುರಂತ ಘಟನೆಗಳು ನಡೆಯುವ ಸಾಧ್ಯತೆ ಇರುವ ಪ್ರದೇಶಗಳನ್ನು ಮೊದಲೇ ಗುರುತಿಸಬೇಕು. ರೆಡ್ ಅಲರ್ಟ್ ಅವಧಿಯಲ್ಲಿ ಅಲ್ಲಿನ ನಿವಾಸಿ ಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಪಾಯಗಳ ಬಗ್ಗೆ ಅಲ್ಲಿನ ನಿವಾಸಿಗಳಿಗೆ ನೋಟಿಸ್ ನೀಡಬೇಕು. ಸಂಭಾವ್ಯ ಭೂಕುಸಿತ ಅನಾಹುತ ಸ್ಥಳಗಳನ್ನು ಗುರುತಿಸದೆ ಅನಾಹುತ ಸಂಭವಿ ಸಿದರೆ ಆಯಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಡಿಸಿ ಎಚ್ಚರಿಸಿದರು.
ಸ್ಥಳೀಯ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ರಚಿಸಬೇಕು. ಸಂಬಂಧಪಟ್ಟ ತಹಶೀಲ್ದಾರ್ ಮತ್ತು ತಾಪಂ ಇಒ ಅದನ್ನು ಪರಿಶೀಲಿಸಬೇಕು. ಪ್ರಾಕೃತಿಕ ದುರಂತದಲ್ಲಿ ನಡೆಯುವ ಜೀವಹಾನಿ ತಪ್ಪಿಸುವುದೇ ಮೊದಲ ಆದ್ಯತೆಯಾಗಬೇಕು. ಪ್ರಮುಖವಾಗಿ ಜನವಸತಿ ಪ್ರದೇಶ ಮತ್ತು ಮನೆಗಳಲ್ಲಿ ವಾಸಿಸುವ ಸಾರ್ವಜನಿಕರ ರಕ್ಷಣೆ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಪ್ರದೇಶಕ್ಕೆ ಭೇಟಿ ನೀಡಿ ಸ್ಥೂಲವಾಗಿ ಪರಿಶೀಲಿಸಬೇಕು. ಪ್ರತಿ ಗ್ರಾಪಂ ವ್ಯಾಪ್ತಿ ಹಾಗೂ ನಗರ ಪಟ್ಟಣ ಪಂಚಾಯತ್‌ನ ಪ್ರತಿ ವಾರ್ಡು ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ವಿಪತ್ತು ನಿರ್ವಹಣೆ ಯೋಜನೆ ತಯಾರಿಸಬೇಕು ಎಂದು ಡಿಸಿ ಹೇಳಿದರು.
ಗುಡ್ಡ ಕಡಿದು ಮನೆ ನಿರ್ಮಿಸುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸ ಬೇಕು. ಪ್ರಾಕೃತಿಕ ನೀರಿನ ಹರಿವನ್ನು ತಿರುಗಿಸುವುದು ಕೂಡ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಬಲ್ಲದು ಎಂದ ಡಿಸಿ ಪ್ರತಿ ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿರುವ ಬಗ್ಗೆ ಸಂಬಂಧಪಟ್ಟ ಮುಖ್ಯ ಶಿಕ್ಷಕರಿಂದ ವರದಿ ಪಡೆಯಬೇಕು. ಅಂಗನವಾಡಿ ಕಟ್ಟಡಗಳ ಕ್ಷಮತೆಯನ್ನು ಪರಿಶೀಲಿಸಬೇಕು ಎಂದರು.
ರಾ.ಹೆ. ಹೆದ್ದಾರಿ ಕೆತ್ತಿಕಲ್‌ನಲ್ಲಿ ಭೂಕುಸಿತ ತಡೆಯುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಸಿ ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಜನವಸತಿ ಪ್ರದೇಶಗಳಿಗೆ ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಿ ಸಮಸ್ಯೆಯಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಒಂದು ವರ್ಷ ಮೊದಲೇ ತಿಳಿಸಲಾಗಿತ್ತು. ಆದರೂ ಅಧಿಕಾರಿಗಳು ಕ್ರಮಕೈಗೊಳ್ಳಲಿಲ್ಲ. ಬುಧವಾರ ಮಧ್ಯಾಹ್ನದೊಳಗೆ ವರದಿ ನೀಡುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು.
ತೀವ್ರ ಗಾಳಿ ಮಳೆಗಳ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಿದ ದೋಣಿಗಳು ಎನ್‌ಎಂಪಿಟಿ ಬಂದರು ಪ್ರವೇಶಿಸುವ ಕುರಿತು ಎನ್‌ಎಂಪಿಎ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಸೂಕ್ತ ಕಾರ್ಯವಿಧಾನ ರೂಪಿಸುವಂತೆ ಸೂಚಿಸಿದರು.
ದ.ಕ.ಜಿಪಂ ಸಿಇಒ ಡಾ.ಆನಂದ್ ಕೆ. ಮಾತನಾಡಿ ಪ್ರಾಕೃತಿಕ ದುರಂತಗಳ ನಂತರ ಸಂತ್ರಸ್ತರನ್ನು ಸ್ಥಳಾಂತರಿಸುವ ಬದಲು ರೆಡ್ ಅಲರ್ಟ್ ಸಮಯದಲ್ಲೇ ಸಂಭಾವ್ಯ ಅನಾಹುತಗಳ ಪ್ರದೇಶದಲ್ಲಿ ನಾಗರಿಕರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಅಂತಹ ಸ್ಥಳಗಳ ಮನೆಗಳಿಗೆ ನೋಟಿಸ್ ಕೊಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಮತ್ತಿತರರು ಉಪಸ್ಥಿತರಿದ್ದರು.