ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ವಕೀಲರ ಸಂಘದ ಸಹಿ ಸಂಗ್ರಹ ಅಭಿಯಾನ

ಮಂಗಳೂರು, ಜೂ.10: ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಮಿತಿಯ ಕರೆಯ ಅನ್ವಯ ಅಖಿಲ ಭಾರತ ವಕೀಲರ ಒಕ್ಕೂಟದ ದ.ಕ.ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರದ ನ್ಯಾಯಾಲಯದ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು ಮತ್ತು ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲ ಯದ ಮಾರ್ಗಸೂಚಿಯನ್ನು ಪಾಲಿಸಬೇಕು. ಕಾನೂನು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಮತ್ತು ಅವರ ಭವಿಷ್ಯವನ್ನು ಅಭದ್ರತೆಯಲ್ಲಿಡುವ ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ ರದ್ದು ಪಡಿಸಬೇಕು. ಕಿರಿಯ ವಕೀಲರ ವೃತ್ತಿ ಆರಂಭದ ಬದುಕಿಗೆ ಪೂರಕವಾಗುವಂತೆ 2 ವರ್ಷಗಳ ಕಾಲ ಮಾಸಿಕ 10 ಸಾವಿರ ರೂ. ಸಹಾಯಧನ ನೀಡಬೇಕು. ರಾಜ್ಯದ ಎಲ್ಲಾ ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ 5 ಲಕ್ಷ ರೂ.ಅನುದಾನ ಮಂಜೂರು ಮಾಡಬೇಕು. ಜಿಲ್ಲಾ ವಕೀಲರ ಸಂಘಗಳಿಗೆ 10 ಲಕ್ಷ ರೂ.ಅನುದಾನ ಮಂಜೂರು ಮಾಡಬೇಕು.
ರಾಜ್ಯ ಸಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡಮಿಗಳನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ರಾಜ್ಯದ ಎಲ್ಲಾ ನ್ಯಾಯಾಲಯಗಳ ಆವರಣದಲ್ಲಿ ವಕೀಲರಿಗೆ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಬೇಕು. ಕಂದಾಯ, ಎಸಿ, ಡಿಸಿ ನ್ಯಾಯಾಲಯ ಗಳ ಕಂದಾಯ ಪ್ರಕರಣಗಳಲ್ಲಿ ತೀರ್ಪುಗಳು ವಿಳಂಬವಾಗುತ್ತಿದೆ. ಹಾಗಾಗಿ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಬೇಕು. ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು.ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು. ಈಗಿರುವ ಅನುದಾನಿತ ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರಕಾರ ನಿಯಂತ್ರಣ ಮಾಡಬೇಕು. ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು. ವಕೀಲರ ಸಂಘದ/ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿತ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ಮುಂದಿಡಲಾಗಿದೆ.
ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮತ್ತು ಹಿರಿಯ ವಕೀಲ ಯಶವಂತ ಮರೋಳಿ, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬಬ್ಬುಕಟ್ಟೆ, ಕಾರ್ಯದರ್ಶಿ ನಿತಿನ್ ಕುತ್ತಾರ್, ಶಾಲಿನಿ ಮನೋಹರ್, ಮನೋಜ್ ವಾಮಂಜೂರು, ಸುನಂದ ಕೊಂಚಾಡಿ, ಚರಣ್ ಶೆಟ್ಟಿ ಪಂಜಿಮೊಗರು ಉಪಸ್ಥಿತರಿದ್ದರು.