ಕೇರಳದಲ್ಲಿ ಹಡಗು ಅಗ್ನಿದುರಂತದ ಗಾಯಾಳುಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ

ಮಂಗಳೂರು, ಜೂ.10: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಸೋಮವಾರ ಸಂಭವಿಸಿದ ಹಡಗು ಅಗ್ನಿದುರಂತದಲ್ಲಿ ಗಾಯಗೊಂಡ ಆರು ಮಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ. ಈ ಪ್ರಕರಣದಲ್ಲಿ ರಕ್ಷಣೆಗೊಳಗಾದ 18 ಮಂದಿ ಸಿಬ್ಬಂದಿಯ ಪೈಕಿ ಇಬ್ಬರು ಸ್ಥಿತಿ ಗಂಭೀರ ಮತ್ತು ನಾಲ್ವರಿಗೆ ಭಾಗಶಃ ಗಾಯವಾಗಿದೆ. ನಾಲ್ವರು ಕಾಣೆಯಾಗಿದ್ದಾರೆ. ಉಳಿದ 12 ಮಂದಿಗೆ ನಗರದ ಹೊಟೇಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇರಳದ ಬೇಪೂರ್ ಕಡಲ ತೀರದಿಂದ 78 ನಾಟಿಕಲ್ ಮೈಲ್ ದೂರದಲ್ಲಿ ಹಡಗಿಗೆ ಬೆಂಕಿ ಆವರಿಸಿತ್ತು. 22 ಮಂದಿ ಸಿಬ್ಬಂದಿಯಿದ್ದ ಈ ಹಡಗಿನ ಬೆಂಕಿ ನಂದಿಸುವ ಕಾರ್ಯ ಮಂಗಳವಾರವೂ ಮುಂದುವರಿದಿದೆ.
ಕೇರಳದ ಬಂದರು ಪ್ರವೇಶಕ್ಕೆ ಅವಕಾಶ ಲಭಿಸದ ಕಾರಣ ಗಾಯಾಳುಗಳನ್ನು ಮಂಗಳೂರು ಸಮೀಪದ ಪಣಂಬೂರಿಗೆ ಕೋಸ್ಟ್‌ಗಾರ್ಡ್ ನೌಕೆಯಲ್ಲಿ ಕರೆತರಲಾಗಿದೆ. ಅಲ್ಲಿಂದ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ರವಾನಿಸಲಾಗಿದೆ. ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಹಡಗಿನಲ್ಲಿ ಪೈಂಟ್, ಗನ್‌ಪೌಡರ್ ಸಹಿತ ಹಲವು ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಸಿಂಗಾಪುರದ ಋ್ಖಿ ವಾನ್ ಹೈ 503 ಎಂಬ ಈ ಹಡಗನ್ನು ಭಾರತ್ ನೇವಿ ಶಿಪ್ ಐಎನ್‌ಎಸ್ ಸೂರತ್‌ನ ಯೋಧರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಕೋಸ್ಟ್‌ಗಾರ್ಡ್‌ನ ಐಸಿಜಿಎಸ್ ರಾಜ್‌ದೂತ್ ನೌಕೆಯ ಮೂಲಕ ನಾಪತ್ತೆಯಾದವರ ಶೋಧ ಕಾರ್ಯ ನಡೆಸುತ್ತಿದೆ.
ಹಡಗಿನಲ್ಲಿ ಹರಡಿರುವ ಬೆಂಕಿ ನಂದಿಸಲು ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ ಐಸಿಜಿಎಸ್ ಸಚೇತ್ ಮತ್ತು ಸಮುದ್ರ ಪ್ರೆಹರಿ ಪ್ರಯತ್ನ ನಡೆಸುತ್ತಿದೆ. ಈ ಹಡಗಿನಲ್ಲಿ ಚೀನಾದ 8, ತೈವಾನ್ 4 , ಮ್ಯಾನ್ಮಾರ್ 4, ಇಂಡೋನೇಷಿಯಾದ 2 ಮಂದಿ ಸಿಬ್ಬಂದಿಗಳಿದ್ದರು. ಘಟನೆಯಲ್ಲಿ ಹಲವಾರು ಕಂಟೇನರ್‌ಗಳು ಹಡಗಿನಿಂದ ಸಮುದ್ರಕ್ಕೆ ಬಿದ್ದಿರುವ ಬಗ್ಗೆ ಭಾರತೀಯ ತಟರಕ್ಷಣಾ ಪಡೆ ಮಾಹಿತಿ ನೀಡಿದೆ.
ಎಂವಿ ವಾನ್ ಹೈ 503 ಎನ್ನುವುದು ಕಂಟೈನರ್ ಶಿಪ್ ಆಗಿದ್ದು, ಈ ಶಿಪ್‌ನ್ನು 2005ರಲ್ಲಿ ನಿರ್ಮಿಸ ಲಾಗಿದೆ. 262.80 ಮೀಟರ್ ಉದ್ದದ ಈ ಹಡಗು 42,532 ಟನ್ ಸರಕು ಸಾಮರ್ಥ್ಯ ಹೊಂದಿದೆ. ಈ ಹಡಗು ಗಂಟೆಗೆ 15 ರಿಂದ 20 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಕೇರಳದ ಬಂದರಿನಲ್ಲಿ ರಕ್ಷಣೆ ಮಾಡಿ ಕರೆದುಕೊಂಡು ಹೋಗಲು ಈ ಹಡಗಿಗೆ ಅನುಮತಿ ಸಿಕ್ಕಿರಲಿಲ್ಲ. ಕೇರಳದ ಕ್ಯಾಲಿಕಟ್‌ನ ಬೇಪೋರ್ ಪೋರ್ಟ್‌ಗೆ ಅನುಮತಿ ಸಿಗಲಿಲ್ಲ. ಹಾಗಾಗಿ ಮಂಗಳೂರು ಬಂದರಿಗೆ ರವಾನಿಸಲಾಗಿತ್ತು. ಜೂ.7ರಂದು ಶ್ರೀಲಂಕಾದಿಂದ ಹೊರಟಿದ್ದ ಹಡಗಿನಲ್ಲಿ ಜೂ.8ರಂದು ಕೇರಳದ ಬೇಪೋರ್ ಸಮೀಪ ಅಗ್ನಿ ಅವಘಡ ಸಂಭವಿಸಿತ್ತು.