ದೇರಳಕಟ್ಟೆ: ಪ್ರಾಕೃತಿಕ ವಿಕೋಪ ಕುರಿತಾಗಿ ಸಮಾಲೋಚನಾ ಸಭೆ

ಕೊಣಾಜೆ: ಅಧಿಕಾರಿಗಳು ಕಷ್ಟಕಾಲದಲ್ಲಿ ಜನರ ಜೊತೆಗಿದ್ದುಕೊಂಡು ಕಾರ್ಯನಿರ್ವಹಿಸಬೇಕಿದೆ. ಆಗ ಇಲಾಖೆಯ ಮೇಲೆ ಜನರಲ್ಲಿ ಪ್ರೀತಿ ಹಾಗೂ ಗೌರವ ಹುಟ್ಟುತ್ತದೆ. ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ಪರಿಹಾರ ವಿತರಣೆ ಹಾಗೂ ಹಾನಿಗೊಳಗಾದ ವರದಿ ತಡವಾಗುತ್ತದೆ. ಮುಂದಿನ ಜೂ.17ರ ಒಳಗೆ ನಡೆಯುವ ಕೆಡಿಪಿ ಸಭೆಯ ಮುನ್ನ ಎಲ್ಲಾ ಭಾಗಶ: , ಪೂರ್ಣ, ಕೃಷಿ ಹಾನಿ ಕುರಿತು ಮಾಹಿತಿ ಗ್ರಾಮಕರಣಿಕರು ಸೇರಿದಂತೆ ಅಧಿಕಾರಿಗಳಲ್ಲಿರಬೇಕಿದೆ ಎಂದು ಎಂದು ವಿಧಾನ ಸಭಾಧ್ಯಕ್ಷ ಯು. ಟಿ.ಖಾದರ್ ಸಲಹೆ ನೀಡಿದರು.
ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಬುಧವಾರ ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಳ್ಳಾಲ ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವಿವಿಧ ಅಧಿಕಾರಿಗಳಿಗಳ ಜೊತೆಗೆ ಪ್ರಾಕೃತಿಕ ವಿಕೋಪ ಕುರಿತಾಗಿ ಮುಂಜಾಗರೂಕತೆ ಕ್ರಮವಾಗಿ ನಡೆದ ತುರ್ತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಕೃಷಿ ಹಾನಿಯಾಗಿದ್ದಲ್ಲಿ ಶೇ.33 ಕ್ಕೆ ಕಾಯದಿರಿ, ಭಾಗಶ: ಹಾನಿಯಾಗಿದ್ದರೂ ಅಧಿಕಾರಿಗಳು ಕೃಷಿಕರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು. ಮನೆಗಳನ್ನು ಗುಡ್ಡ ಕುಸಿಯುವಂತಹ ಡೇಂಜರ್ ಝೋನ್ ಗಳಲ್ಲಿ ಕಟ್ಟದಂತೆ ಅಧಿಕಾರಿಗಳು ನೋಡಿಕೊಳ್ಳಿ. ಮತ್ತೆ ಕುಸಿದುಬಿದ್ದಾಗ ಜನಪ್ರತಿನಿಧಿಗಳನ್ನೇ ಹೊಣೆಯಾಗಿಸುತ್ತಾರೆ. ಕಿನ್ಯಾ ಗ್ರಾಮ ಪಂಚಾಯತ್ ಕಟ್ಟಡ ಹಿಂಭಾಗದ ಅಂಗನವಾಡಿ ಕೇಂದ್ರದ ಮೇಲೆ ಗುಡ್ಡ ಕುಸಿಯುವ ಆತಂಕವಿರುವುದನ್ನು ಪರಿಶೀಲಿಸಲಾಗುವುದು. ಜಾನುವಾರು ಸಾವನ್ನಪ್ಪಿರುವ ಪ್ರಕರಣದಲ್ಲಿಯೂ ಗರಿಷ್ಠ ಪರಿಹಾರ ನೀಡುವಂತೆಯೂ ಒತ್ತಾಯಿಸಿದರು. ಪ್ರಾಕೃತಿಕ ವಿಕೋಪದಲ್ಲಿ ಸರಿಯಾದ ಸಮಯದಲ್ಲಿ ಪರಿಹಾರ ಸಿಕ್ಕಿರುವ ಕುರಿತು, ಗ್ರಾಮ ಪಂಚಾಯತ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿರುವ ಕುರಿತಾಗಿ ಪರಿಶೀಲನೆ ನಡೆಸಲಾಗಿದೆ.
ಉಳ್ಳಾಲ ತಾಲೂಕಿನ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆಗಳ ಕುರಿತಾಗಿ ಮಾಹಿತಿ ನೀಡಿದರು.
ಸಹಾಯಕ ಆಯುಕ್ತ ಹರ್ಷವರ್ಧನ್, ತಹಶೀಲ್ದಾರ್ ಪುಟ್ಟರಾಜು, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್ ಉಪಸ್ಥಿತರಿದ್ದರು.
ಅಗ್ನಿ ಶಾಮಕ ದಳ, ಅರಣ್ಯ, ಮೆಸ್ಕಾಂ, ಕಂದಾಯ, ಹಾಗೂ ಶಿಕ್ಷಣ ಇಲಾಖೆಗಳು ಅಪಾಯದಲ್ಲಿರುವ ಶಾಲೆಗಳನ್ನು, ಮನೆಗಳನ್ನು ಗುರುತಿಸಿ ವರದಿ ನೀಡುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಅವರವರ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವಂತೆಯೂ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.







