ಹಳೆ ಕಾರ್ಮಿಕ ಕಾಯ್ದೆ ಬದಲಾಯಿಸಲು ಕೇಂದ್ರ ಮುತುವರ್ಜಿ: ಶೋಭಾ ಕರಂದ್ಲಾಜೆ

ಮಂಗಳೂರು: ಬ್ರಿಟಿಷರ ಕಾಲದ 29 ಕಾರ್ಮಿಕ ಕಾಯ್ದೆಗಳು ಇಂದಿಗೂ ಅಸ್ತಿತ್ವದಲ್ಲಿದ್ದು, ಅವುಗಳನ್ನು ಪ್ರಸಕ್ತ ಕಾಲದ ಆವಶ್ಯಕತೆಗೆ ತಕ್ಕಂತೆ ಬದಲಾಯಿಸುವ ಕುರಿತು ಕೇಂದ್ರ ಸರ್ಕಾರ ಮುತುವರ್ಜಿ ವಹಿಸುತ್ತಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕನಿಷ್ಠ ವೇತನ ಏರಿಕೆ ಕೂಡ ಅಗತ್ಯವಾಗಿದ್ದು, ಈ ಕುರಿತು ಕೂಡ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.
ಗಿಗ್ ಹಾಗೂ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ದೊಡ್ಡ ಯೋಜನೆ ರೂಪು ಗೊಳ್ಳುತ್ತಿದೆ. ಈ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿ, ಕಾರ್ಮಿಕ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ದುಡಿಯುತ್ತಿರುವ ಸುಮಾರು 80 ಕೋಟಿ ಜನರಲ್ಲಿ 10 ಕೋಟಿ ಜನರಿಗೆ ಮಾತ್ರ ಪಿಎಫ್, ಇಎಸ್‌ಐ ಮತ್ತಿತರ ಸಾಮಾಜಿಕ ಭದ್ರತೆಯ ಯೋಜನೆ ಪ್ರಯೋಜನ ದೊರೆಯುತ್ತಿದೆ. ಉಳಿದ 70 ಕೋಟಿ ಕಾರ್ಮಿಕರು ಈ ಸೌಲಭ್ಯ ವಂಚಿತರಾಗಿದ್ದಾರೆ ಎಂದವರು ಹೇಳಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವಾಲದಯದ ಪೋರ್ಟಲ್‌ನಲ್ಲಿ ಸಚಿವಾಲಯದ ವ್ಯಾಪ್ತಿಯಲ್ಲಿ ಒಳಪಡುವ 6.45 ಉದ್ಯಮಗಳು ನೋಂದಣಿಯಾಗಿವೆ. ದೇಶದಲ್ಲಿ ಅತ್ಯಧಿಕ ಜನರು ಅವಲಂಬಿಸಿರುವ ಕೃಷಿ ಕ್ಷೇತ್ರವು ಜಿಡಿಪಿಗೆ ಶೇ.18 ಕೊಡುಗೆ ನೀಡುತ್ತಿದ್ದರೆ, ಅಧಿಕ ಉದ್ಯೋಗ ಒದಗಿಸುವ ವಿಷಯದಲ್ಲಿ ಎರಡನೇ ಸ್ಥಾನದಲ್ಲಿರುವ ಎಂಎಸ್‌ಎಂಇ ದೇಶದ ಸುಮಾರು 26 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿದೆ. ಜಿಡಿಪಿಗೆ ಶೇ.30 ಕೊಡುಗೆ ನೀಡುತ್ತಿದೆ. ರಫ್ತಾಗುವ ವಸ್ತುಗಳಲ್ಲಿ ಎಂಎಸ್‌ಎಂಇ ಪಾಲು ಶೇ.40 ಇದೆ ಎಂದು ಅವರು ವಿವರಿಸಿದರು.
ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ದೇಶದಲ್ಲಿ ಪ್ರವಾಸ ನಡೆಸುವ ಸಂದರ್ಭ ಗಡಿಗಳ ರಕ್ಷಣೆ, ಭ್ರಷ್ಟಾಚಾರ ರಹಿತ ಸರ್ಕಾರ, ಪ್ರಧಾನಿ ಸ್ಥಾನದ ಘನತೆಯ ರಕ್ಷಣೆ ಹಾಗೂ ದೇಶದ ಅಭಿವದ್ಧಿಗೆ ವೇಗ ಎನ್ನುವ ಪ್ರಧಾನ ನಾಲ್ಕು ಪ್ರಧಾನ ನಾಲ್ಕು ಭರವಸೆಗಳನ್ನು ಜನತೆಗೆ ನೀಡಿದ್ದರು. ಈ ಭರವಸೆ ಇಂದು ಈಡೇರಿದೆ. ಆಂತರಿಕ, ಬಾಹ್ಯ ಸುರಕ್ಷೆ ಎರಡೂ ಸಾಧ್ಯವಾಗಿದೆ. ದೇಶದ ಸೇನೆಯು ಶೇ.95 ರಷ್ಟು ಸ್ವಾವಲಂಬನೆ, ಆತ್ಮ ನಿರ್ಭರತೆ ಸಾಧಿಸಿದೆ ಸಾಧಿಸಿದೆ. ಯುದ್ಧ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಷ್ಟು ನಾವು ಬೆಳೆದಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಭಾರತದ ಆರ್ಥಿಕತೆಯು ಇಂದು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದ ಸಮೀಪವಿದೆ. ಶೀಘ್ರದಲ್ಲೇ ಮೂರನೇ ಸ್ಥಾನ ಪಡೆಯುವುದು ಮೋದಿ ಅವರ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ರೈಲ್ವೆ, ಮೆಟ್ರೋ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಸೌಲಭ್ಯ ವಿಸ್ತರಣೆಗೆ ರಾಜ್ಯ ಸರ್ಕಾರ ಅಗತ್ಯ ಜಮೀನು ಒದಗಿಸುತ್ತಿಲ್ಲ. ರಾಜ್ಯದ ಜಿಲ್ಲಾಧಿಕಾರಿಗಳು ಸಹಕಾರ ನೀಡುತ್ತಿಲ್ಲ. ನೀತಿ ಆಯೋಗದ, ಹಳೇ ಯೋಜನಾ ಆಯೋಗದ ಸಭೆಗಳಿಗೆ ಮುಖ್ಯಮಂತ್ರಿ ಹಾಜರಾಗುವುದಿಲ್ಲ. ಸಭೆಯಲ್ಲಿ ರಾಜ್ಯದ ಬೇಡಿಕೆಗಳನ್ನು ಮುಂದಿಡಬೇಕಾದ ಮುಖ್ಯಮಂತ್ರಿ ಗೈರು ಹಾಜರಾದರೆ ನಷ್ಟವಾಗುವುದು ಜನರಿಗೆ ಎಂದು ಅವರು ಆಕ್ಷೇಪಿಸಿದರು.
ರಾಜ್ಯ ಸರ್ಕಾರದ ತೆರಿಗೆ ಪಾಲು ಕೇಂದ್ರ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿಯವರು ಆರೋಪಿಸುತ್ತಾರೆ. 2004 ರಿಂದ 2014 ತನಕ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂದಿರುವ ಮೊತ್ತ 1,044,58 ಕೋಟಿ ರೂಪಾಯಿ. ಆದರೆ 2014 ರಿಂದ 2024 ತನಕ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 5,42,341 ಕೋಟಿ ರೂ ಬಂದಿದೆ. ಇದರಲ್ಲಿ ಯಾವುದು ದೊಡ್ಡ ಮೊತ್ತ ಎನ್ನುವುದನ್ನು ಹಣಕಾಸು ಸಚಿವರಾಗಿ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಹೇಳಬೇಕು ಎಂದು ಸಚಿವೆ ಶೋಭಾ ಹೇಳಿದರು.
ಸಿದ್ದರಾಮಯ್ಯ ಅವರು ಗ್ಯಾರಂಟಿ ಹೆಸರಿನಲ್ಲಿ ಸುಮ್ಮನೆ ಡ್ರಾಮಾ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಡ್ರಾಮಾ ಮಾಡೋಣ. ಆದರೆ ಇತರ ಸಂದರ್ಭ ಅಭಿವೃದ್ಧಿ ಕೆಲಸಗಳಿಗೆ ಗಮನ ಕೊಡೋಣ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಬಿಜೆಪಿ ದಕ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಯತೀಶ್, ಹರೀಶ್ ಕಂಜಿಪಿಲಿ, ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ಸಂಜಯ ಪ್ರಭು, ವಸಂತ ಪೂಜಾರಿ, ರೂಪಾ ಡಿ.ಬಂಗೇರ ಉಪಸ್ಥಿತರಿದ್ದರು.
ಆರ್‌ಸಿಬಿ ವಿಜಯೋತ್ಸವ ಸಂದರ್ಭ ಬೆಂಗಳೂರಿನಲ್ಲಿ 11 ಮಂದಿ ಸಾವು ಸಂಭವಿಸಿದ ದುರಂತವನ್ನು ಮರೆಮಾಚಲು ರಾಜ್ಯ ಸರ್ಕಾರ ಹೈ ಕಮಾಂಡ್ ಜತೆ ಸೇರಿ ಜಾತಿ ಮರುಗಣತಿಯ ನಾಟಕ ಮಾಡುತ್ತಿದೆ ಎಂದು ಮಂಗಳೂರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಲಿಂಗಾಯಿತರು, ಬ್ರಾಹ್ಮಣರು ಸಹಿತ ಎಲ್ಲ ಜಾತಿಗಳನ್ನು ಒಡೆಯುವ ಕೆಲಸವನ್ನು ಈ ಜಾತಿಗಣತಿಯ ಮೂಲಕ ಸಿದ್ದರಾಮಯ್ಯ ಅವರ ಸರ್ಕಾರ ಮಾಡುತ್ತಿದೆ. ಇದರ ಅಂತಿಮ ಉದ್ದೇಶ ಅಲ್ಪಸಂಖ್ಯಾತರ ಸಂಖ್ಯೆ ಅಧಿಕ ತೋರಿಸಿ ಅವರಿಗೆ ಅಧಿಕ ಪ್ರಮಾಣದ ಮೀಸಲಾತಿ ಒದಗಿಸುವುದು ಆಗಿದೆ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.







