ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ನಿರಂತರ ಶ್ರಮ ಅಗತ್ಯ: ನ್ಯಾಯಾಧೀಶೆ ಜೈಬುನ್ನಿಸಾ

ಮಂಗಳೂರು, ಜೂ.12:ಬಾಲ ಕಾರ್ಮಿಕ ಪದ್ಧತಿ ವಿರುದ್ಧ ನಿರಂತರವಾಗಿ ಹೋರಾಡಿದರೆ ಮಾತ್ರ ದ.ಕ.ಜಿಲ್ಲೆಯು ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಬಹುದು. ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಎಂಬ ಮಾತಿದೆ. ಹಾಗಾಗಿ ಶಿಕ್ಷಣ ಪ್ರತಿಯೊಬ್ಬರ ಜೀವನದ ಮುಖ್ಯವಾದ ಹಂತ ಎಂಬುದನ್ನು ಗಮನದಲ್ಲಿ ಟ್ಟುಕೊಂಡು ಚಿನ್ನದಂತಹ ಈ ಅವಕಾಶವನ್ನು ಸದುಪಯೋಗಪಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಹೇಳಿದರು.
ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯ ದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವಾದ ಗುರುವಾರ ನಗರದ ಪುರಭವನ ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಬಾಲಕಾರ್ಮಿಕತೆಯನ್ನು ನಿರ್ಮೂಲ ನೆಗೊಳಿಸಿ ಶಿಕ್ಷಣವನ್ನು ನೀಡಿದರೆ ದೇಶ ಬಲಿಷ್ಠವಾಗಬಹುದು. ಮಕ್ಕಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಬೇಕಾದರೆ ಬಾಲಕಾರ್ಮಿಕತೆಯ ವಿರುದ್ಧ ಶ್ರಮವಹಿಸಬೇಕು. ಇದರ ನಿರ್ಮೂಲ ನೆಯು ಇಲಾಖೆಗಳಿಗೆ ಮಾತ್ರ ಸೇರಿದ್ದಲ್ಲ. ಎಲ್ಲರ ಹೊಣೆಯೂ ಆಗಿದೆ. ಹೋಟೆಲ್ ಅಥವಾ ಫ್ಯಾಕ್ಟರಿಗಳಲ್ಲಿ ಸಂಬಂಧಪಟ್ಟ ಇಲಾಖೆಯ ದೂರವಾಣಿ ಸಂಖ್ಯೆ ಅಳವಡಿಸಬೇಕು. ಇದರಿಂದ ಸಾರ್ವನಿಕರಿಗೆ ಬಾಲ ಕಾರ್ಮಿಕರು ಕಂಡರೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲು ಸಹಾಯವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ನಿಖೇಶ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಎಂ.ಎಸ್. ಮಹಾದೇವ, ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಹಿರಿಯ ಅಧಿಕಾರಿ ಡಾ. ಸುಮಂಗಳ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಅಡಿಗ, ಪ್ರದೀಪ್ ಡಿಸೋಜ, ಪರಿಸರ ಅಧಿಕಾರಿ ಡಾ. ಲಕ್ಷ್ಮಿಕಾಂತ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಭರತ್, ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ, ಸಹಾಯಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್., ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅಕ್ಷತಾ ಆದರ್ಶ್, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಪಡಿ ಸರಕಾರೇತರ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ್ ಬಿ.ಆರ್. ಸ್ವಾಗತಿಸಿದರು. ವಿಲ್ಮಾ ವಂದಿಸಿದರು. ಡಾ.ಮಂಜುಳಾ ಶೆಟ್ಟಿ, ಉಮೇಶ್ ಕಾರ್ಯಕ್ರಮ ನಿರೂಪಿಸಿದರು.







