ಮಂಗಳೂರು: ಕರ್ಣಾಟಕ ಬ್ಯಾಂಕಿನಿಂದ ಸ್ನೇಹಾಲಯಕ್ಕೆ ಕೊಡುಗೆ

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯ ಮೂಲಕ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಸ್ನೇಹಾಲಯಕ್ಕೆ,50 ಕೋಟ್ ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬುಗಳು ಸೇರಿದಂತೆ ಒಟ್ಟು 10.57 ಲಕ್ಷ ರೂ. ಮೌಲ್ಯದ ಕೊಡುಗೆಗಳನ್ನು ಗುರುವಾದ ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನೀಡಲಾಯಿತು.
ಕರ್ಣಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶ್ಯಾಮ್ ಕುಮಾರ್ ಉಪಸ್ಥಿತರಿದ್ದರು. ಸ್ನೇಹಾಲಯದ ಚಾಪ್ಲಿನ್ ವಂ.ಫಾದರ್ ಸಿರಿಲ್ ಡಿಸೋಜಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ, ಸಭಿಕರನ್ನು ಮತ್ತು ಅತಿಥಿಗಳನ್ನು ಆಶೀರ್ವದಿಸಿದರು.
ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಜೋಸೆಫ್ ಕ್ರಾಸ್ಟಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕೇಂದ್ರದ ಸ್ಫೂರ್ತಿದಾಯಕ ಪಯಣವನ್ನು ಹಂಚಿ ಕೊಂಡರು. “ಇವು ಕೇವಲ ಹಾಸಿಗೆಗಳು ಅಥವಾ ಕಂಬಳಿಗಳಲ್ಲ; ಇವು ನಿಮ್ಮ ಕಾಳಜಿ, ಭರವಸೆ ಮತ್ತು ಚೇತರಿಕೆಯ ಕಾರ್ಯದಲ್ಲಿ ನಂಬಿಕೆಯ ಸಂಕೇತಗಳು. ಇವು ನಮ್ಮ ನಿವಾಸಿಗಳಿಗೆ ‘ಸಮಾಜ ನಿಮ್ಮನ್ನು ಮರೆತಿಲ್ಲ, ನೀವು ಪ್ರೀತಿಪಾತ್ರರು’ ಎಂಬ ಸಂದೇಶವನ್ನು ನೀಡುತ್ತವೆ,” ಎಂದರು.ಈ ಕಾರ್ಯಕ್ರಮವು ಒಗ್ಗಟ್ಟು, ಪ್ರೀತಿ ಮತ್ತು ಮಾನವೀಯತೆಯ ಸುಂದರ ಪ್ರತಿಬಿಂಬವಾಗಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಯು ಭಾಗವಹಿಸಿದ ಈ ಸಭೆಯಲ್ಲಿ, ಸ್ನೇಹಾಲಯ ಸಂಸ್ಥೆಯ ಮಿಷನ್ನಲ್ಲಿ ನಂಬಿಕೆಯಿಟ್ಟು, ಸಮಾಜಮುಖೀ ಕಾರ್ಯದಲ್ಲಿ ಕೈಜೋಡಿಸಿದ ಕರ್ನಾಟಕ ಬ್ಯಾಂಕಿಗೆ ಚಿರೃಣಿಯಾಗಿದೆ ಎಂದರು.
2021-22ರಲ್ಲಿ ಕರ್ಣಾಟಕ ಬ್ಯಾಂಕ್ ಸ್ನೇಹಾಲಯಕ್ಕೆ ಎಲೆಕ್ಟ್ರಿಕ್ ಆಟೋ ದಾನ ಮಾಡಿದ್ದನ್ನು ಅವರು ಪ್ರೀತಿಯಿಂದ ನೆನಪಿಸಿಕೊಂಡರು. ಕರ್ಣಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ವಿಶ್ವನಾಥ್ ಎಸ್.ಆರ್. ವಿಶ್ವನಾಥ್ ಮಾತನಾಡುತ್ತಾ, “ಕರ್ಣಾಟಕ ಬ್ಯಾಂಕಿನ ಸಿಎಸ್ಆರ್ ಬೆಂಬಲವು ನೊಂದ ಜೀವಿಗಳಿಗೆ ತಲುಪಿರುವುದಕ್ಕೆ ನಾನು ಹೆಮ್ಮೆಪಡುತ್ತೇನೆ. ಸ್ನೇಹಾಲಯ ನಿಸ್ವಾರ್ಥವಾಗಿ ಅದ್ಭುತ ಕೆಲಸ ವನ್ನು ಮಾಡುತ್ತಿದೆ. ಈ ಪಯಣದ ಭಾಗವಾ ಗಿರುವುದು ನನಗೆ ಗೌರವದ ಸಂಗತಿ. ಭವಿಷ್ಯದಲ್ಲೂ ನಮ್ಮ ನಿರಂತರ ಬೆಂಬಲವಿರುತ್ತದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ನೇಹಾಲಯದ ಉಪ ಕಾರ್ಯನಿರ್ವಾಹಕರಾದ ವೀಣಾ, ಬ್ಯಾಂಕ್ ಮತ್ತು ಅದರ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು. “ಇಂತಹ ದಯೆಯ ಕಾರ್ಯಗಳು ವ್ಯಕ್ತಿಗಳನ್ನು ಮಾತ್ರವಲ್ಲ, ಇಡೀ ಸಮುದಾಯವನ್ನು ಉನ್ನತೀಕರಿಸುತ್ತವೆ ಎಂದರು.







