ಮುಡಿಪು: ನೂತನ ಕಾರಾಗೃಹ ನಿರ್ಮಾಣ ಪ್ರದೇಶಕ್ಕೆ ಗೃಹ ಸಚಿವರ ಭೇಟಿ; ಪರಿಶೀಲನೆ

ಕೊಣಾಜೆ:ಉಳ್ಳಾಲ ತಾಲೂಕಿನ ಮುಡಿಪು ಸಮೀಪದ ಇರಾ ಬಳಿ ನಿರ್ಮಾಣಗೊಳ್ಳುತ್ತಿರುವ ನೂತನ ಜಿಲ್ಲಾ ಕಾರಾಗೃಹ ನಿರ್ಮಾಣ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ನಿರ್ಮಾಣ ಹಂತದ ಕಟ್ಟಡ ವೀಕ್ಷಿಸಿದ ಅವರು ಕಾಮಗಾರಿಗಳ ಮಾಹಿತಿ ಪಡೆದುಕೊಂಡು, ಕಾಮಗಾರಿ ಯನ್ನು ಉತ್ತಮ ಗುಣಮಟ್ಟದಲ್ಲಿ ತ್ವರಿತಗತಿಯಲ್ಲಿ ನಡೆಸಿ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. ಕಾರಾಗೃಹದ ಆವರಣ ಗೋಡೆ ಸೇರಿದಂತೆ ಅತ್ಯುನ್ನತ ಭದ್ರತಾ ವ್ಯವಸ್ಥೆ ನೂತನ ಕಾರಾಗೃಹ ಸಂಕೀರ್ಣದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರಾಗೃಹ ಇಲಾಖೆ ಡಿಐಜಿ ದಿವ್ಯಶ್ರೀ ಅವರು ಸಚಿವರಿಗೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಪೋಲಿಸ್ ಮಹಾ ನಿರ್ದೇಶಕ ಎಂ.ಎ. ಸಲೀಂ , ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ, ಉಳ್ಳಾಲ ತಾಲೂಕು ತಹಶಿಲ್ದಾರ್ ಪುಟ್ಟರಾಜು, ಕಂದಾಯ ಅಧಿಕಾರಿ ಪ್ರಮೋದ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಸೂಕ್ತ ಜಮೀನಿನ ಹುಡುಕಾಟದಲ್ಲಿದ್ದಾಗ ಕೊನೆಗೆ ಮುಡಿಪು ಸಮೀಪದ ಇರಾ ಕೆಐಡಿಬಿ ಪ್ರದೇಶದಲ್ಲಿ ನಿರ್ಧಿಷ್ಟ ಜಾಗವನ್ನು ಗುರುತಿಸಲಾಗಿತ್ತು. ಸುಮಾರು ಐದು ವರ್ಷಗಳ ಹಿಂದೆಯೇ ನೂತನ ಕಾರಾಗೃಹ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು ಕಾಮಗಾರಿ ಆರಂಭಗೊಂಡಿತ್ತು.







