ಕರಾವಳಿಯಲ್ಲಿ ಕೋಮುವಾದ ಹೋಗಲಾಡಿಸಲು ಯುವಜನರು ಧ್ವನಿ ಎತ್ತಬೇಕಿದೆ: ಬಸವರಾಜ ಪೂಜಾರ್
ಯುವ ಜನರ ಸಂಘಟನಾ ಕಾರ್ಯಾಗಾರ

ಮಂಗಳೂರು: ಕರಾವಳಿ ಭಾಗದ ಜನತೆಯ ಶಾಂತಿ, ಸೌಹಾರ್ದ ಹಾಗೂ ಸಾಮರಸ್ಯದ ಬದುಕಿಗೆ ಕೋಮುವಾದವು ಗಂಡಾಂತರ ತಂದೊಡ್ಡಿದೆ. ಉದ್ಯೋಗವಿಲ್ಲದೆ ಹತಾಶರಾಗಿರುವ ಯುವಜನರನ್ನು ಈ ಮತೀಯವಾದಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಮ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭ ಯುವಜನತೆ ಕೋಮುವಾದಕ್ಕೆ ಬಲಿಯಾಗದೆ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕಾಗಿ ಐಕ್ಯತೆಯಿಂದ ಪ್ರಬಲವಾಗಿ ಧ್ವನಿ ಎತ್ತಬೇಕಿದೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಕರೆ ನೀಡಿದರು.
ಉದ್ಯೋಗ ಸೃಷ್ಟಿಸಿ.. ನಿರುದ್ಯೋಗದಿಂದ ರಕ್ಷಿಸಿ... ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಿ.... ಘೋಷಣೆಯಡಿ ನಗರದ ಕಲಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ದ.ಕ. ಜಿಲ್ಲಾ ಮಟ್ಟದ ಯುವಜನರ ಸಂಘಟನಾ ಕಾರ್ಯಾಗಾರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಗರ ಸಾಮರಸ್ಯದ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿರುವ ಕೋಮುವಾದವನ್ನು ಮಟ್ಟ ಹಾಕುವಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದೆ. ರಾಜಕೀಯ ಲಾಭಕ್ಕಾಗಿ ಜನ ಸಮಾನ್ಯರನ್ನು ಬಲಿಕೊಡುವ ಹೀನ ರಾಜಕಾರಣವನ್ನು ಜನತೆ ಐಕ್ಯತೆಯಿಂದ ಸೋಲಿಸಬೇಕು ಎಂದು ಬಸವರಾಜ್ ಪೂಜಾರ್ ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿವೈಎಫ್‌ಐ ಮುಖಂಡರಾದ ನಿತಿನ್ ಕುತ್ತಾರ್, ಮಾಧುರಿ ಬೋಳಾರ್, ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ ಉಪಸ್ಥಿತರಿದ್ದರು.







