ಕೆತ್ತಿಕಲ್‌ನಲ್ಲಿ ಮತ್ತೆ ಗುಡ್ಡ ಕುಸಿತ: ಅಪಾಯದ ಭೀತಿ

ಮಂಗಳೂರು: ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ ಕೆತ್ತಿಕಲ್‌ನಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ಮಳೆ ತೀವ್ರಗೊಂಡರೆ ಇನ್ನೂ ದೊಡ್ಡ ಪ್ರಮಾಣದ ದುರಂತ ಸಂಭವಿಸುವ ಸಾಧ್ಯತೆಯಿದ್ದು, ಕೆತ್ತಿಕಲ್ ಸುತ್ತಲ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಶನಿವಾರ ರಾತ್ರಿ ವೇಳೆ ಎರಡು ಬಾರಿ ಗುಡ್ಡ ಕುಸಿತವಾಗಿದೆ. ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು, ಬಂಡೆಕಲ್ಲು, ಮರಗಳು ಹೆದ್ದಾರಿಯ ಒಂದು ಪಾರ್ಶ್ವಕ್ಕೆ ಬಿದ್ದಿದೆ.
ಮುನ್ನಚ್ಚರಿಕೆ ಕ್ರಮವಾಗಿ ಹೆದ್ದಾರಿಯಲ್ಲಿ ಮತ್ತೊಂದು ಪಾರ್ಶ್ವದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗುಡ್ಡದ ಮಣ್ಣು, ಬಂಡೆ ಕಲ್ಲು ರವಿವಾರವೂ ಕುಸಿದಿದ್ದು, ಹೆದ್ದಾರಿ ವಿಸ್ತರಣೆಯ ಗುತ್ತಿಗೆ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಸಂಸ್ಥೆಯ ಸಿಬ್ಬಂದಿ ಸಾಧ್ಯವಿರುವ ಎಲ್ಲ ಕಡೆ ತುರ್ತು ದುರಸ್ತಿ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಅಗೆದ ಕಾರಣ ಕಳೆದ ವರ್ಷ ಗುಡ್ಡದ ಒಂದು ಕಡೆಯಲ್ಲಿ ಗುಡ್ಡ ಕುಸಿದಿತ್ತು. ಹೆದ್ದಾರಿ ವಿಸ್ತರಣೆಗಾಗಿ ಗುಡ್ಡ ಕೊರೆಯಲಾದ ಪ್ರದೇಶದಲ್ಲಿ ಕಳೆದ 2 ದಿನ ಗಳಿಂದ ಗುಡ್ಡ ಕುಸಿಯುತ್ತಿದೆ. ಇದರಿಂದ ಹೆದ್ದಾರಿ ಸಂಚಾರ ತೀವ್ರ ಸಮಸ್ಯೆ ಉಂಟಾಗಿದೆ. ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಅಪಾಯಕರವೆನಿಸಿದೆ. ಯಾವುದೇ ಸಂದರ್ಭದಲ್ಲಿ ಮತ್ತಷ್ಟು ಗುಡ್ಡದ ಮಣ್ಣು ಕಲ್ಲು ಹೆದ್ದಾರಿಗೆ ಬೀಳಬಹುದು. ಗುಡ್ಡದ ಮೇಲೆ ಕೆಲವು ಬಂಡೆಕಲ್ಲುಗಳು ಅರ್ಧಕ್ಕೆ ಕುಸಿದು ನಿಂತಿವೆ.
*ವೆಟ್‌ವೆಲ್‌ಗೂ ಅಪಾಯ: ಮಂಗಳೂರು ಮಹಾನಗರ ಪಾಲಿಕೆಯು ಸುಮಾರು 7 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ವೆಟ್‌ವೆಲ್ ಈಗ ತೀರಾ ಅಪಾಯದಲ್ಲಿದೆ.
ಕಳೆದ ವರ್ಷ ಗುಡ್ಡ ಕುಸಿತ ಭಾಗದಲ್ಲಿ ಈ ವೆಟ್‌ವೆಲ್ ಇದ್ದು, ಈ ಬಾರಿ ಇಲ್ಲಿ ಗುಡ್ಡದ ಮಣ್ಣು ಮತ್ತಷ್ಟು ಕುಸಿಯುತ್ತಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸುತ್ತಿರುವ ಗ್ಯಾಬಿಯನ್ ವಾಲ್ ಸಂಪೂರ್ಣ ಕುಸಿದಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.







