ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ

ಮಂಗಳೂರು, ಜೂ.16: ಪ್ರಸಕ್ತ 2025-26ನೇ ಸಾಲಿನಲ್ಲಿ ಆಟಿಸಂ, ಬೌದ್ಧಿಕ ವಿಕಲತೆ, ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಹಾಗೂ ಕಾಯಿಲೆಯಿಂದ ಬಳಲುತ್ತಿರುವ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ತಿಂಗಳು 1,000 ರೂ. ಪ್ರೋತ್ಸಾಹ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ವಿಶಿಷ್ಟ ಗುರುತಿನ ಚೀಟಿಗೆ ಪ್ರಮಾಣ ಪತ್ರ ಕಡ್ಡಾಯ (ವಿಕಲತೆಯ ಪ್ರಮಾಣ ಶೇ.75 ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು)ವಾಗಿ ಪಡೆದಿರಬೇಕು. ಆರೈಕೆದಾರರು ರಾಜ್ಯದಲ್ಲಿ ವಾಸವಿರುವ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ ಪಡೆದಿರಬೇಕು. ಆರೈಕೆದಾರರು 18 ವರ್ಷ ಮೇಲ್ಪಟ್ಟವರಾಗಿರಬೇಕು. ವಿಕಲಚೇತನರ ಹಾಗೂ ಆರೈಕೆದಾರರ ಆಧಾರ್ ಕಾರ್ಡ್ ಬೇಕು. ಜಂಟಿ ಭಾವಚಿತ್ರ (ವಿಕಲಚೇತನ ವ್ಯಕ್ತಿಗಳ ಮತ್ತು ಆರೈಕೆದಾರರ) ಬೇಕು. ಆರೈಕೆ ದಾರರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ 7 ಬೇಕು. ಆರೈಕೆ ಪಡೆಯುವವರು ಆರೈಕೆ ಮಾಡುವವರು ಪರಸ್ಪರ ಒಪ್ಪಿರುವ ಬಗ್ಗೆ ವತ್ತು ಉತ್ತಮ ಆರೈಕೆ ಒದಗಿಸುವ ಬಗ್ಗೆ ಲಿಖಿತ ಪ್ರಮಾಣ ಪತ್ರ, ವಿಕಲಚೇತನ ವ್ಯಕ್ತಿಯ ಜೀವಂತ ಪ್ರಮಾಣ ಪತ್ರದ ಪ್ರತಿಯನ್ನು ಪ್ರತಿ ವರ್ಷ ಕಡ್ಡಾಯವಾಗಿ ಸಲ್ಲಿಸಬೇಕು. ವಿಕಲಚೇತನ ವ್ಯಕ್ತಿಯ ಜೀವಂತ ಪ್ರಮಾಣ ಪತ್ರವನ್ನು ಪ್ರತೀ ವರ್ಷ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ದಿಂದ ಕಡ್ಡಾಯವಾಗಿ ಪಡೆದು ಸಲ್ಲಿಸಬೇಕು ಹಾಗೂ ಬಿಪಿಎಲ್ ಕಾರ್ಡ್‌ದಾರರು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಅರ್ಹ ಫಲಾನುಭವಿಗಳು ಅರ್ಜಿಯನ್ನು ಆಯಾ ತಾಲೂಕಿನ ಎಂಆರ್‌ಡಬ್ಲ್ಯೂ, ಆರ್‌ಡಬ್ಲ್ಯೂಗಳಿಂದ ಪಡೆದು ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಗೆ ಜು.5ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ. ಜಿಪಂ ಕಟ್ಟಡ, ಅಶೋಕನಗರ ಅಂಚೆ, ಕೊಟ್ಟಾರ, ಮಂಗಳೂರು ಹಾಗೂ ದೂ.ಸಂ: 0824-2455999ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







