ಡಾ. ಕಾವಲಕಟ್ಟೆ ಹಝ್ರತ್ಗೆ ಸೈಯದ್ ಪೊಸೋಟ್ ತಂಙಳ್ ಪುರಸ್ಕಾರ

ಡಾ. ಮುಹಮ್ಮದ್ ಫಾಝಿಲ್ ರಝ್ವಿ
ಮಂಗಳೂರು: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ - ಲೌಕಿಕ ಶಿಕ್ಷಣ ಸಂಸ್ಥೆ ಮುಈನುಸ್ಸುನ್ನಃ ಅಕಾಡೆಮಿ ಹಾವೇರಿ ಇದರ ಸ್ಥಾಪಕ ಅಧ್ಯಕ್ಷರೂ ಅಧ್ಯಾತ್ಮ ಗುರುಗಳೂ ಆಗಿದ್ದ ಸೈಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್ ತಂಙಳ್ ಅವರ ಸ್ಮರಣಾರ್ಥ ಸಂಸ್ಥೆಯು ನೀಡುವ ಸಾಧಕ ಪುರಸ್ಕಾರಕ್ಕೆ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಹಝ್ರತ್ ಆಯ್ಕೆಯಾಗಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಜೂನ್ 21ರಂದು ಹೊಸಂಗಡಿ ಮಳ್ಹರ್ ಸಂಸ್ಥೆಯಲ್ಲಿ ನಡೆಯುವ ಪೊಸೋಟ್ ತಂಙಳ್ ಉರೂಸ್ ಸಮಾರೋಪದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಡಾ. ಫಾಝಿಲ್ ರಝ್ವಿ ಹಝ್ರತ್ ತಮ್ಮ ಸೇವೆಯನ್ನು ಬಂಟ್ವಾಳ ತಾಲೂಕಿನ ಕಾವಲಕಟ್ಟೆ ಕೇಂದ್ರೀಕರಿಸಿ ನಡೆಸುವ ಮೂಲಕ 'ಕಾವಲಕಟ್ಟೆ ಹಝ್ರತ್' ಎಂದೇ ಜನಪ್ರಿಯರಾಗಿದ್ದಾರೆ. ಆಧ್ಯಾತ್ಮಿಕ ಮಾರ್ಗದರ್ಶನ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ವೈದ್ಯಕೀಯ ಸೇವೆ, ಜನ ಜಾಗೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಹಝ್ರತ್, ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾಗಿ, ಕಾವಲಕಟ್ಟೆ ಅಲ್ ಖಾದಿಸ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ, ಹಲವು ಸಂಘಸಂಸ್ಥೆಗಳ ಪ್ರಮುಖರಾಗಿ ದುಡಿಯುತ್ತಿರುವ ಅವರು ಉತ್ತಮ ವಾಗ್ಮಿಯಾಗಿಯೂ ಪ್ರಸಿದ್ಧರಾಗಿದ್ದಾರೆ.
ಹಾವೇರಿ ಮುಈನುಸ್ಸುನ್ನಾ ಅಕಾಡೆಮಿಯು ನೀಡುತ್ತಿರುವ ಪೊಸೋಟ್ ತಂಙಳ್ ಪುರಸ್ಕಾರವನ್ನು ಈ ಹಿಂದೆ ಡಾ. ಫಾರೂಕ್ ನಈಮಿ ಕೊಲ್ಲಂ, ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಡಾ. ದೇವರ್ಶೋಲ ತಮಿಳುನಾಡು ಅವರಿಗೆ ನೀಡಲಾಗಿದೆ.
ಸಂಸ್ಥೆಯ ಅಧ್ಯಕ್ಷ ಸೈಯದ್ ಶಹೀರ್ ಅಲ್ ಬುಖಾರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಪ್ರಶಸ್ತಿ ಪ್ರದಾನ ಮಾಡುವರು. ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕೆಎಂ ನಯೀಮಿ ಹಾವೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







