ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಪತ್ರಿಕೋದ್ಯಮದ ಗುರಿಯಾಗಬೇಕು: ಹಿರಿಯ ಚಿಂತಕ ಶಿವಸುಂದರ್
ಮಂಗಳೂರು ವಿವಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮಂಗಳೂರು: ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಪತ್ರಿಕೋದ್ಯಮದ ಗುರಿಯಾಗಬೇಕು ಎಂದು ಹಿರಿಯ ಚಿಂತಕ ಶಿವಸುಂದರ್ ತಿಳಿಸಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ವಿಜ್ಞಾನ ಬ್ಲಾಕ್ ನ ಯು.ಆರ್. ರಾವ್ ಸಭಾಂಗಣದಲ್ಲಿ ಬುಧವಾರ 'ಭಾರತೀಯ ಮಾಧ್ಯಮದಲ್ಲಿ ಜಾತಿ ಮತ್ತು ಕಾರ್ಪೊರೇಟ್ ಏಕಸ್ವಾಮ್ಯ' ದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಪ್ರಜಾಪ್ರಭುತ್ವದ ಮೌಲ್ಯ ಗಳನ್ನು ರಕ್ಷಿಸುವಲ್ಲಿ ಸಂವಿಧಾನಿಕ ಸಂಸ್ಥೆಗಳೆ ವಿಫಲವಾಗಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಿರುವ ಪತ್ರಿಕಾರಂಗದ ಮೇಲೆ ಮಹತ್ವದ ಹೊಣೆಗಾರಿಕೆ ಇದೆ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಂದಂತೆ ಸ್ವತಂತ್ರ ಮಾಧ್ಯಮಗಳಿಲ್ಲದೆ ಇದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಲ್ಲದೆ ಇದ್ದರೆ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸ್ವಾತಂತ್ರ್ಯ ಪರಿಪೂರ್ಣವಾಗದು ಎನ್ನುವುದು ಇಂದಿಗೂ ಸತ್ಯವಾಗಿದೆ. ಪ್ರಜಾಪ್ರಭುತ್ವ ಯಾವುದೇ ಏಕ ಸ್ವಾಮ್ಯವನ್ನು ಒಪ್ಪುವುದಿಲ್ಲ. ಭಾರತದಲ್ಲಿನ ಜಾತಿ ವ್ಯವಸ್ಥೆಯ ಶ್ರೇಣೀಕೃತ ವ್ಯವಸ್ಥೆ ಸಮಾಜದಲ್ಲಿ ಫ್ಯಾಸಿಸಮ್ ಧೋರಣೆ ಹುಟ್ಟು ಹಾಕಿದೆ. ಇದರೊಂದಿಗೆ ಅಲ್ಪ ಸಂಖ್ಯಾತರ, ದಲಿತರ ಮೇಲಿನ ದ್ವೇಷ ದೌರ್ಜನ್ಯಗಳಿಗೂ ಮೂಲ ಕಾರಣವಾಗಿದೆ. ಹುಸಿ ರಾಷ್ಟ್ರ ಪ್ರೇಮವನ್ನು ಹುಟ್ಟು ಹಾಕಿದೆ. ಫ್ಯಾಸಿಸಂ ಪ್ರಜಾಪ್ರಭುತ್ವದ ಎಲ್ಲಾ ಮೌಲ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಇದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಕಾರಣ ಉದ್ಯಮ ರಂಗದಲ್ಲೂ ಬ್ರಾಹ್ಮಣ ಶಾಹಿ ವ್ಯವಸ್ಥೆ ಪ್ರಾಬಲ್ಯ ವನ್ನು ಸಾಧಿಸಿದೆ. ಸಮಾಜದಲ್ಲಿ ಜಾತಿ ಆಧಾರಿತ ನೀತಿಗಳು ಬಲಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನು ದುರ್ಬಲಗೊಳಿಸುತ್ತಿವೆ.ಆ ಕಾರಣದಿಂದ ಮೇಲ್ವರ್ಗದವರ ಹೆಸರಿನ ಹೊಟೇಲುಗಳು ಕಾಣಸಿಗುತ್ತವೆ. ದಲಿತರ ಹೆಸರಿನ ಹೊಟೇಲುಗಳು ಕಂಡು ಬರುವುದಿಲ್ಲ. ಇದು ಮಾಧ್ಯಮ ರಂಗದಲ್ಲೂ ವ್ಯಾಪಿಸಿದೆ. ಪರಿಣಾಮವಾಗಿ ನಿರ್ಭಯ ಪ್ರಕರಣದ ಮೊದಲು ಖೈರ್ಲಾಂಜಿಯಲ್ಲಿ ದಲಿತರ ಮೇಲೆ ಸವರ್ಣೀಯರು ನಡೆಸಿದ ದೌರ್ಜನ್ಯ, ಅತ್ಯಾಚಾರ ಪ್ರಕರಣದ ನೈಜ ಕಾರಣವನ್ನು ಬಹುತೇಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳಲಿಲ್ಲ. ಆದರೆ ದಲಿತರ ನಿರಂತರ ಹೋರಾಟದ ಫಲವಾಗಿ ಅದು ಬೆಳಕಿಗೆ ಬಂತು. ಒಂದು ದೇಶ ಒಂದು ಸಂಸ್ಕೃತಿಯ ಮಾತುಗಳು ಕೇಳಿ ಬರುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ನಮ್ಮ ದೇಶದ ಸಂವಿಧಾನ ಇಲ್ಲಿನ ಬಹುತ್ವಕ್ಕೆ ಮನ್ನಣೆ ನೀಡಿದೆ. ದಲಿತರು, ಶೂದ್ರರು ಮಹಿಳೆಯರು ಸೇರಿದಂತೆ ಬಹುತ್ವ, ಎಲ್ಲರಿಗೂ ಸಮಾನತೆಯ ಅವಕಾಶ ನೀಡಬೇಕೆನ್ನುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಬುದ್ಧನ ಸಂದೇಶದಲ್ಲಿ ಬರುವ ಪ್ರಜ್ಞಾ,ಶೀಲ, ಕರುಣ,ಮೈತ್ರಿ ಮಾಧ್ಯಮಗಳ ಪಾಲನೆಗೆ ಯೋಗ್ಯ ಮೌಲ್ಯಗಳಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲೂ ಪ್ರಜಾಪ್ರಭುತ್ವದ ಮೌಲ್ಯಗಳಿರಬೇಕಾಗಿದೆ. ಶಿಕ್ಷಣ ಸಂಸ್ಥೆ ಗಳಲ್ಲಿ ಶಿಕ್ಷಣ ನೀಡುವುದು ಪ್ರಥಮ ಗುರಿಯಾಗಬೇಕೆ ಹೊರತು ಹಿಜಾಬ್ ಹಾಕಬೇಕೆ ಬೇಡವೆ ಎಂಬ ಇತರ ವಿಚಾರಗಳ ಮೇಲೆ ಅನಗತ್ಯ ಹೇರಿಕೆ ಸಲ್ಲದು. ಸಂವಿಧಾನ ನೀಡಿರುವ ಹಕ್ಕುಗಳ ಪಾಲನೆ ಅಗತ್ಯ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶಿವಸುಂದರ್ ಅವರ ಭಾಷಣ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಚಿಂತನೆಗೆ ಹಚ್ಚುವ ಕಾರ್ಯಕ್ರಮಗಳು ಇನ್ನಷ್ಟು ನಡೆಯ ಬೇಕಾಗಿದೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಮಂಗಳೂರು ವಿ.ವಿ.ಯಕುಲಸಚಿವ ಕೆ.ರಾಜು ಮೊಗವೀರ, ಮಂಗಳೂರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಧ್ಯಕ್ಷ ಎಂ.ಪಿ. ಉಮೇಶ್ ಚಂದ್ರ ಉಪಸ್ಥಿತರಿದ್ದರು.







