ಟ್ರೇಡ್ ಲೈಸೆನ್ಸ್: ರಾಜ್ಯಾದ್ಯಂತ ಒಂದೇ ಸಾಫ್ಟ್‌ವೇರ್ ಬಳಕೆ
ಮಂಗಳೂರು: ಟ್ರೇಡ್ ಲೈಸೆನ್ಸ್ ನೀಡಲು ಹಾಗೂ ನವೀಕರಣ ಮಾಡಲು ಪ್ರಸ್ತುತ ನಗರ ಪಾಲಿಕೆಯು ತನ್ನದೇ ಆದ ತಂತ್ರಾಂಶವನ್ನು ಬಳಕೆ ಮಾಡುತ್ತಿತ್ತು. ಇದೀಗ ರಾಜ್ಯಾದ್ಯಂತ ಒಂದೇ ಮಾದರಿಯ ತಂತ್ರಾಂಶ ಬಳಕೆ ಮಾಡಬೇಕು ಎಂಬ ಸರಕಾರದ ನಿರ್ದೇಶನ ಪ್ರಕಾರ ಮಂಗಳೂರು ನಗರದಲ್ಲಿ ಹೊಸ ತಂತ್ರಾಂಶ ಜಾರಿಗೆ ತರಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ.
ರಾಜ್ಯ ಸರಕಾರ ವರ್ತಕರಿಗೆ ಟ್ರೇಡ್ ಲೈಸೆನ್ಸ್ ನೀಡುವ ಸಲುವಾಗಿ ’ವ್ಯಾಪಾರ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದ ಮೂಲಕ ಪ್ರಸ್ತುತ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಟ್ರೇಡ್ ಲೈಸೆನ್ಸ್ ನೀಡುತ್ತಿದ್ದು, ಇನ್ನು ಮಂಗಳೂರು ಮಹಾನಗರಪಾಲಿಕೆಯು ’ವ್ಯಾಪಾರ ತಂತ್ರಾಂಶ’ವನ್ನು ಬಳಕೆ ಮಾಡಲಿದೆ.
*ಖಾಸಗಿ ತಂತ್ರಾಂಶ ಸೇವೆ ಸ್ಥಗಿತ: ’ವ್ಯಾಪಾರ ತಂತ್ರಾಂಶ’ದ ಮೂಲಕ ಟ್ರೇಡ್ ಲೈಸೆನ್ಸ್ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಹಳೆಯ ತಂತ್ರಾಂಶದ ಮೂಲಕ ಟ್ರೇಡ್ ಲೈಸೆನ್ಸ್ ನೀಡುವುದು ಹಾಗೂ ನವೀಕರಣ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಸರಕಾರದ ಆದೇಶದಂತೆ ’ವ್ಯಾಪಾರ ತಂತ್ರಾಂಶ’ವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
*ಹೊಸ ಸಾಫ್ಟ್‌ವೇರ್ ಬಳಕೆ ಹೇಗೆ?: ಟ್ರೇಡ್ ಲೈಸೆನ್ಸ್ ಪಡೆಯಲು ಬಯಸುವವರು ಹಾಗೂ ನವೀಕರಣ ಮಾಡಲು ಉದ್ದೇಶಿಸಿರುವ http://www.mrc.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸಿಟಿಜನ್ ಆನ್‌ಲೈನ್ ಸರ್ವೀಸ್’ ವಿಭಾಗವನ್ನು ಕ್ಲಿಕ್ ಮಾಡಿದರೆ ವಿವಿಧ ಸೇವೆಗಳು ತೆರೆದುಕೊಳ್ಳಲಿದೆ. ಅದರಲ್ಲಿ ’ಅಪ್ಲೈ ಫಾರ್ ’ಟ್ರೇಡ್ ಲೈಸನ್ಸ್’ ವಿಭಾಗವನ್ನು ಕ್ಲಿಕ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ತುಂಬಿ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬಹುದು.
ಈ ತಂತ್ರಾಂಶದ ಮೂಲಕ ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಸಹ ಪಾವತಿಸಬಹುದು. ವರ್ತಕರು ಸಲ್ಲಿಸಿದ ಅರ್ಜಿಯು ಪ್ರಸ್ತುತ ಯಾವ ಹಂತದಲ್ಲಿದೆ ಎಂಬುದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಪರವಾನಿಗೆಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಹಿಂದೆ ಹಲವು ಹಂತದ ಪರಿಶೀಲನೆ ನಡೆಯುತಿತ್ತು. ಆದರೆ ಹೊಸ ತಂತ್ರಾಂಶದಲ್ಲಿ ಎರಡು ಹಂತದ ಪರಿಶೀಲನೆ ಮಾತ್ರ ನಡೆಯುತ್ತದೆ.
ಖಾಸಗಿ ತಂತ್ರಾಂಶದಲ್ಲಿ ಪಡೆದಿರುವ ಉದ್ದಿಮೆ ಪರವಾನಿಗೆಯನ್ನು ನವೀಕರಿಸಲು ಸಂಬಂಧ ಪಟ್ಟ ದಾಖಲೆಗಳನ್ನು ಹೊಸದಾಗಿ ನೀಡಿ ವ್ಯಾಪಾರ ತಂತ್ರಾಂಶದಲ್ಲಿ ನೋಂದಾಯಿಸುವಂತೆ ಹಾಗೂ ಹೊಸ ಉದ್ದಿಮೆ ಪರವಾನಿಗೆಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರು ವ್ಯಾಪಾರ ತಂತ್ರಾಂಶವನ್ನು ಬಳಸುವಂತೆ ಮಹಾನಗರಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







