ಕುಶಲಕರ್ಮಿ ದೇವಕಿ ಶೆಟ್ಟಿಗಾರ್‌ಗೆ ಸನ್ಮಾನ

ಮಂಗಳೂರು: ತುಳುನಾಡಿನ ಪಾರಂಪರಿಕ ಕೈ ಮಗ್ಗ ವೃತ್ತಿಗೆ ತುಳುನಾಡಿನ ಜನತೆ ಎಲ್ಲಾ ರೀತಿಯ ಸಹಕಾರ ಬೆಂಬಲ ಕೊಡಬೇಕು ಎಂದು ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ಕಿನ್ನಿಗೋಳಿ ನೇಕಾರ ಸೌಧದಲ್ಲಿ ಕದಿಕೆ ಟ್ರಸ್ಟ್ ಸಹಯೋಗ ದಲ್ಲಿ ಶನಿವಾರ ಆಯೋಜಿಸಿದ ಕೈ ಮಗ್ಗದ ನೇಯ್ಗೆಯ ಹಿರಿಯ ಕುಶಲಕರ್ಮಿ ದೇವಕಿ ಶೆಟ್ಟಿಗಾರ್‌ಗೆ ’ಚಾವಡಿ ತಮ್ಮನ’ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಬೆಳೆದು ಬಂದ ನೇಯ್ಗೆ ವೃತ್ತಿಯ ಬಗ್ಗೆ ನಾವೆಲ್ಲ ಅಭಿಮಾನಪಟ್ಟುಕೊಳ್ಳುತ್ತೇವೆ. ಈ ಸಂದರ್ಭ ನಮ್ಮದೇ ನೆಲದಲ್ಲಿ ಹುಟ್ಟಿ ಬೆಳೆದ ಒಂದು ಕಾಲದಲ್ಲಿ ಕುಲಕಸುಬಾಗಿದ್ದ ಕೈ ಮಗ್ಗ ನೇಯ್ಗೆಯವರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ವರ್ಷ ದಲ್ಲಿ ಒಂದು ಬಾರಿಯಾದರೂ ತುಳುನಾಡಿನ ಸೀರೆ ಹಾಗೂ ಕೈ ಮಗ್ಗದ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಡಾ. ಅಮರಶ್ರೀ ಅಮರನಾಥ ಶೆಟ್ಟಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವಕಿ ಶೆಟ್ಟಿಗಾರ್ ತಾಳಿಪಾಡಿ ನೇಕಾರರ ಸೇವಾ ಸಂಘ ಹಾಗೂ ಕದಿಕೆ ಟ್ರಸ್ಟ್ ಅವರ ಕಾರಣದಿಂದಾಗಿ ನಾನು ಮತ್ತೇ ನನ್ನ ಮೂಲ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನನಗೆ ಸಿಕ್ಕಿದ ಗೌರವವು ಈ ಎರಡೂ ಸಂಸ್ಥೆಗಳಿಗೆ ಅರ್ಪಿಸುತ್ತೇನೆ ಎಂದರು.
ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಅಭಿನಂದನಾ ಭಾಷಣ ಮಾಡಿದರು. ಸಾಹಿತಿಗಳಾದ ಡಾ. ಪ್ರಭಾಕರ ನೀರ್‌ಮಾರ್ಗ, ಕೊಡೆತ್ತೂರು ಸಚ್ಚಿದಾನಂದ ಉಡುಪ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಮಾತನಾಡಿದರು.
ತಾಳಿಪಾಡಿ ನೇಕಾರರ ಸೇವಾ ಸಂಘದ ಅಧ್ಯಕ್ಷೆ ರುಕ್ಮಿಣಿ ಶೆಟ್ಟಿಗಾರ್, ನಿರ್ವಾಹಕ ನಿರ್ದೇಶಕ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಅಮಿತಾ ಅಶ್ವಿನ್ ಸನ್ಮಾನ ಪತ್ರ ವಾಚಿಸಿದರು. ಕದಿಕೆ ಟ್ರಸ್ಟ್‌ನ ಕಾರ್ಯ ದರ್ಶಿ ಬಿ.ಸಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತುಳು ಅಕಾಡಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ವಂದಿಸಿದರು.







