ಕುಶಿ ಅವರಲ್ಲಿ ಮಾನವ ಘನತೆಯನ್ನು ಎತ್ತಿ ಹಿಡಿಯುವ ದೊಡ್ಡ ಗುಣ: ಡಾ.ಬಿಳಿಮಲೆ
ಡಾ.ರಾಜೇಂದ್ರ -ಡಾ.ವಿಜಯಶ್ರೀಗೆ ಕು.ಶಿ. ಜಾನಪದ ಪ್ರಶಸ್ತಿ ಪ್ರದಾನ

ಉಡುಪಿ, ಜೂ.21: ಮಾನವ ಘನತೆ ಕುಂದು ಬಂದಾಗ ಅದನ್ನು ಎತ್ತಿ ಹಿಡಿಯುವ ಗುಣ ಕು.ಶಿ.ಹರಿದಾಸ ಭಟ್ಟರಿಗೆ ಗಾಂಧಿ ಮತ್ತು ಫ್ಯೂಡೋರ್ ಡೋಸ್ಟೋವಿನ್ಕಿ ಅವರಿಂದ ಬಂದಿದೆ. ಹರಿದಾಸ ಭಟ್ಟರ ವ್ಯಕ್ತಿತ್ವ, ಬರವಣಿಗೆ, ಮಾತುಗಳನ್ನು ನಾವು ಎಚ್ಚರದಿಂದ ಅಭ್ಯಾಸ ಮಾಡಿದರೆ ನಮಗೆ ಮತ್ತು ಮುಂದಿನ ತಲೆ ಮಾರಿಗೆ ಸಾಕಷ್ಟು ಲಾಭವಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಣಿಪಾಲ ಇದರ ವತಿಯಿಂದ ಉಡುಪಿ ಎಂ.ಜಿ.ಎಂ ಕಾಲೇಜಿನ ಟಿ. ಮೋಹನದಾಸ್ ಪೈ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಶ್ರೀಮತಿ ಆಶಾ ಮತ್ತು ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ.ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕು.ಶಿ. ಹರಿದಾಸ ಭಟ್ಟರ ಲೋಕಾಭಿರಾಮ ಸಂಪುಟಗಳಲ್ಲಿನ ಆಯ್ದ 100-200 ಲೇಖನಗಳನ್ನು ಸೇರಿಸಿ ಒಂದು ಸಂಪುಟವನ್ನು ಹೊರತರುವ ಕಾರ್ಯ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕು.ಶಿ. ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿಯನ್ನು ಡಾ.ಡಿ.ಕೆ.ರಾಜೇಂದ್ರ ಮೈಸೂರು ಹಾಗೂ ಕು.ಶಿ. ಜಾನಪದ ಪ್ರಶಸ್ತಿಯನ್ನು ಡಾ.ವಿಜಯಶ್ರೀ ಸಬರದ ಬೆಂಗಳೂರು ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಿಜಯಶ್ರೀ, ಜಾನಪದ ಸಾಹಿತ್ಯ ಅಂದರೆ ತಾಯಿ ಅಂತಃಕರಣ, ಬದುಕುವ ಕಲೆ ಹಾಗೂ ಜೀವನ ಪ್ರೀತಿ. ಇದು ಇಂದಿನ ಅತಿ ಅಗತ್ಯವಾಗಿದೆ. ಆದುದರಿಂದ ಜಾನಪದ ಸಾಹಿತ್ಯದ ಬಗ್ಗೆ ಯುವಜನತೆಯಲ್ಲಿ ಆಸಕ್ತಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ವಹಿಸಿದ್ದರು. ಮೈಸೂರು ವಿ.ವಿ.ಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಮತ್ತು ನಿರ್ದೇಶಕ ಡಾ.ಲೋಲಾಕ್ಷಿ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡಿದರು.
ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಉಪಸ್ಥಿತರಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿ ಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಸಿ ವಂದಿಸಿದರು.







