ಮಂಗಳೂರು| ರೀಲ್ಸ್‌ಗಳಿಗೆ ಲೈಕ್ ನೆಪದಲ್ಲಿ ವಂಚನೆ: ಪ್ರಕರಣ ದಾಖಲು

ಮಂಗಳೂರು, ಜೂ.21: ರೀಲ್ಸ್‌ಗಳಿಗೆ ಲೈಕ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ನಿಗದಿತ ಟೆಲಿಗ್ರಾಂ ಖಾತೆಗೆ ಕಳುಹಿಸಿದರೆ ಮತ್ತು ಹಣ ಹೂಡಿಕೆ ಮಾಡಿದರೆ ಕಮಿಷನ್ ಸಿಗಲಿದೆ ಎಂದು ನಂಬಿಸಿ 2.30 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ.14ರಂದು ಅಪರಿಚಿತರು ಕೋಲ್ಡ್ ವಿಂಟರ್ ಎನ್ನುವ ಟೆಲಿಗ್ರಾಂ ಗ್ರೂಪ್‌ಗೆ ನನ್ನನ್ನು ಸೇರಿಸಿದ್ದಾರೆ. ಅದರಲ್ಲಿದ್ದ ಲಿಂಕ್‌ಗೆ ಕ್ಲಿಕ್ ಮಾಡಿದಾಗ ರೀಲ್ಸ್‌ಗಳು ಕಂಡು ಬಂದಿದೆ. ಅದಕ್ಕೆ ಲೈಕ್ಸ್ ಕೊಟ್ಟು ಸ್ಕ್ರೀನ್ ಶಾಟ್ ತೆಗೆದು ಇನ್ನೊಂದು ಟೆಲಿಗ್ರಾಂ ಖಾತೆಗೆ ಕಳುಹಿಸುವಂತೆ ಸಂದೇಶ ಬಂದಿದೆ. ಅದರಂತೆ ತಾನು ಸ್ಕ್ರೀನ್‌ಶಾಟ್ ಕಳುಹಿಸಿದ್ದು, ಆಗ ಕಮಿಷನ್ ರೂಪದಲ್ಲಿ ಬ್ಯಾಂಕ್ ಖಾತೆಗೆ 150 ರೂ. ಜಮೆಯಾಗಿದೆ. ಬಳಿಕ ಟೆಲಿಗ್ರಾಂ ಖಾತೆಯ ಇನ್ನೋರ್ವ ವ್ಯಕ್ತಿಯ ಖಾತೆಗೆ ತಾನು ಕಳುಹಿಸುವ ಕೋಡ್ ಫಾರ್ವರ್ಡ್ ಮಾಡುವಂತೆ ಮೊದಲಿನ ವ್ಯಕ್ತಿ ಸೂಚಿಸಿದ್ದ. ಅದರಂತೆ ತಾನು ಕೋಡ್ ಕಳಿಹಿಸಿದೆ. ಬಳಿಕ ಎರಡನೇ ವ್ಯಕ್ತಿ ಹಣ ಹೂಡಿಕೆ ಮಾಡಿದರೆ ಶೇ.10ರಷ್ಟು ಕಮಿಷನ್ ನೀಡುವುದಾಗಿ ಸಂದೇಶ ಹಾಕಿದ್ದ. ಆತನಲ್ಲಿ ವಿಚಾರಿಸಿದ ಬಳಿಕ ಮೊದಲಿಗೆ 4,500 ರೂ. ವರ್ಗಾವಣೆ ಮಾಡಿದ್ದ. ಬಳಿಕ ಇನ್ನೊಂದು ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದು, ಆದರಲ್ಲಿ ಜೂ.16ರವರೆಗೆ ತನ್ನ ಮತ್ತು ಸ್ನೇಹಿತೆಯ ಖಾತೆಯಿಂದ 2.30 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದಾರೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.





