ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಮಂಗಳೂರು, ಜೂ.23: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತಗೊಂಡಿವೆ. ಸರಕಾರದ ಆಡಳಿತದಿಂದ ಜನತೆ ಕಂಗೆಟ್ಟಿದ್ದಾರೆ. ಜನನ ಮತ್ತು ಮರಣ ಪ್ರಮಾಣಪತ್ರದ ಶುಲ್ಕವನ್ನು 70 ರೂ.ಗೆ ಏರಿಸಿ ದರೋಡೆಗೆ ಇಳಿದಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮಿಷ್ಟದಂತೆ ಬಂದು ಹೋಗುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಮುಂದೆ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರದಿಂದ ಆಗುತ್ತಿರುವ ಅನ್ಯಾಯವನ್ನು ಸಾರ್ವಜನಿಕರು ಜನಪ್ರತಿನಿಧಿಗಳ ಬಳಿ ಹೇಳಿಕೊಳ್ಳುತ್ತಿ ದ್ದಾರೆ. ಕಳೆದ ಮೂರು ತಿಂಗಳಿನಿಂದ ಮನಪಾದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಮತೆ ಯಾವುದೇ ಸಭೆಯನ್ನು ಉಸ್ತುವಾರಿ ಸಚಿವರು ನಡೆಸಿಲ್ಲ. ಈಗ ನಗರದಲ್ಲಿ ಕೃತಕ ನೆರೆಗೆ ಬಿಜೆಪಿ ಕಾರಣವೆಂದು ಹೇಳುತ್ತಿರುವುದು ಅಕ್ಷಮ್ಯ ಎಂದು ವೇದವ್ಯಾಸ ಕಾಮತ್ ಹೇಳಿದರು.
ರಾಜ್ಯ ಸರಕಾರ ಯಾವುದೇ ಹೊಸ ರೇಶನ್ ಕಾರ್ಡ್‌ಗೆ ಅರ್ಜಿ ಸ್ವೀಕರಿಸುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ 7 ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರಕಾರ ಮುಂದಾಗಿದೆ. ಮುಡಾ ಅಧ್ಯಕ್ಷರ ಅಧಿಕಾರ ಕಸಿದುಕೊಳ್ಳಲಾಗಿದೆ. ಮುಡಾಕ್ಕೆ ಸಲ್ಲಿಸಿದ ಅರ್ಜಿಗಳು ಬೆಂಗಳೂರಿನಲ್ಲಿ ಇತ್ಯರ್ಥವಾಗುತ್ತಿದೆ. ಕೃಷಿ ಭೂಮಿ ನೋಂದಣಿ ಆಗುತ್ತಿಲ್ಲ. ಬಡವರಿಗೆ ಹಕ್ಕುಪತ್ರ ನೀಡುತ್ತಿಲ್ಲ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಬರುತ್ತಿಲ್ಲ, ಆಶಾ ಕಾರ್ಯಕರ್ತರ ವೇತನ ಹೆಚ್ಚಿಸಿಲ್ಲ. ವಿದ್ಯುತ್ ದರ ಏರಿಕೆ ಮಾಡಲಾ ಗಿದೆ. ಬಿಜೆಪಿ ಅವಧಿಯಲ್ಲಿ ಶಿಲಾನ್ಯಾಸ ನಡೆಸಿ, ಅನುದಾನ ಮೀಸಲಿಟ್ಟು ಪೂರ್ಣಗೊಂಡ ಕಾಮಗಾರಿಗಳು ಈಗ ಕಾಂಗ್ರೆಸ್‌ನವರು ಉದ್ಘಾಟಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಯಾವುದೇ ಕಾಮಗಾ ರಿಗೆ ಶಿಲಾನ್ಯಾಸ ನಡೆಸಿಲ್ಲ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು.
ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಮಾತನಾಡಿದರು. ಬಿಜೆಪಿ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಮುಖರಾದ ವಕೀಲ ಸುಧಾಕರ ಜೋಶಿ, ನಿತಿನ್‌ಕುಮಾರ್, ರವಿಶಂಕರ ಮಿಜಾರ್, ರಾಜಗೋಪಾಲ ರೈ, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಪ್ರವೀಣ್‌ಕುಮಾರ್ ಭಾಗವಹಿಸಿದ್ದರು.







