ಅಚ್ಚು ಬೆಲ್ಲದ ಮಾರಾಟದಲ್ಲಿ ಪಡೆದ ಅನುಭವ ಬದುಕಿಗೆ ಹೊಸ ದಾರಿಯನ್ನು ತೋರಿಸಿತು: ಝಕರಿಯಾ ಜೋಕಟ್ಟೆ

ಮಂಗಳೂರು: ಎಸೆಸೆಲ್ಸಿ ಅನುತ್ತೀರ್ಣಗೊಂಡ ಬಳಿಕ ಮನೆಯ ಕಷ್ಟಕ್ಕೆ ಸ್ಪಂದಿಸಲು ಅನಿವಾರ್ಯವಾಗಿ ಬೆಲ್ಲದ ವ್ಯಾಪಾರ ಆರಂಭಿಸಿದೆ. ದಿನಾಲು ಐವತ್ತು ಕೆ.ಜಿ. ಅಚ್ಚು ಬೆಲ್ಲದ ಮೂಟೆ ಹೊತ್ತು ಮನೆಮನೆಗೆ ಹೋಗಿ ಮಾರಾಟ ಮಾಡುವಲ್ಲಿ ಅಂದು ತಾನು ಪಡೆದ ಅನುಭವ ನನ್ನ ಬದುಕಿಗೆ ಹೊಸ ದಾರಿಯನ್ನು ತೋರಿಸಿತು ಎಂದು ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪೆನಿಯ ಸಿಇಒ, ಸಮಾಜಸೇವಕ ಝಕರಿಯಾ ಜೋಕಟ್ಟೆ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ತನ್ನ ಬದುಕಿನ ಪಯಣದ ಹಾದಿಯನ್ನು ತೆರೆದಿಟ್ಟ ಅವರು ತನ್ನ ಅಜ್ಜ ಗುತ್ತಿನ ಮನೆಯವರಾಗಿದ್ದರೂ, ಭೂ ಸುಧಾರಣೆ ಕಾಯಿದೆಯಿಂದ ಇದ್ದ ಜಮೀನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಮನೆಯ ಆರ್ಥಿಕ ಸ್ಥಿತಿ ಕಷ್ಟದ ಕಾರಣ 10ನೇ ತರಗತಿ ತನಕ ಶಿಕ್ಷಣ ಮುಗಿಸಿ ಆ ಬಳಿಕ ಅಚ್ಚು ಬೆಲ್ಲದ ವ್ಯಾಪಾರ ಶುರು ಮಾಡಿದೆ. ಅಚ್ಚು ಬೆಲ್ಲದ ವ್ಯಾಪಾರ ಕುಟುಂಬದ ಆರ್ಥಿಕ ಸ್ಥಿತಿಯನ್ನು ದೂರ ಮಾಡಿತು ಎಂದು ಹೇಳಿದರು.
ತಂದೆ-ತಾಯಿಯ ಹರಕೆ, ಹಾರೈಕೆ , ಒಡ ಹುಟ್ಟಿದವರ ಬೆಂಬಲದಿಂದ ನಾನು ವೃತ್ತಿ ಬದುಕಿನಲ್ಲಿ ಯಶಸ್ಸು ಸಿಕ್ಕಿತು. 1972ರಲ್ಲಿ ವೆಲ್ಡಿಂಗ್ ಸಹಾಯಕನಾಗಿ ಸೇರಿಕೊಂಡೆ. ಮುಂದೆ ಎನ್‌ಎಂಪಿಟಿಯಲ್ಲಿ ಡೆಜ್ಜಿಂಗ್ ಕೆಲಸ ಮಾಡುವ ಕಂಪೆನಿಯ ಕಂಟ್ರಾಕ್ಟರ್ ಒಬ್ಬರ ಬಳಿ ಸೇರಿಕೊಂಡು ಒಂದು ವರ್ಷ ದುಡಿದು ಅನುಭವ ಗಳಿಸಿದೆ ಎಂದು ಹೇಳಿದರು.
ಜಮಾತ್‌ನ ದಪ್ ತಂಡ ಸೇರಿಕೊಂಡು ವಿರಾಮದ ವೇಳೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದೆ. ಅದರಲ್ಲಿ ಸಂಗ್ರಹವಾಗುವ ಹಣವನ್ನು ಬಡ ಹೆಣ್ಣು ಮಕ್ಕಳ ಮದುವೆಗೆ ನೀಡುತ್ತಿದ್ದೆವು. ನನಗೆ ಸೌದಿ ಅರೇಬಿಯಾಕ್ಕೆ ಹೋಗಿ ದುಡಿಯಬೇಕೆಂಬ ಕನಸು ಚಿಕ್ಕಂದಿನಲ್ಲೇ ಇತ್ತು. ಒಬ್ಬರ ನೆರವಿನಲ್ಲಿ ಆ ನಿಟ್ಟಿನಲ್ಲಿ ಮುಂಬೈಗೆ ತೆರಳಿದೆ. ಆದರೆ ಅಲ್ಲಿ ನಮ್ಮನ್ನು ಸೌದಿಗೆ ಕರೆದುಕೊಂಡು ಹೋಗುವ ಭರವಸೆ ನೀಡಿದ ಏಜೆಂಟ್ ಕೈಕೊಟ್ಟರು. ಹೀಗಾಗಿ 6 ತಿಂಗಳು ಅಲ್ಲಿಯೇ ಬಾಕಿಯಾದೆ. ಹೊಸ ಪಿಕ್ಚರ್‌ಗಳ ಟಿಕೆಟ್ ಸೇಲ್ ಮಾಡಿ ಅದರಲ್ಲಿ ಬಂದ ಆದಾಯವನ್ನು ಮನೆಗೆ ಕಳುಹಿಸಿಕೊಡುತ್ತಿದ್ದೆ. 1979 ಸೆಪ್ಟಂಬರ್ 7ಕ್ಕೆ ಯುಎಇಗೆ ಹೊರಟೆ. ಅಂದು ವಿಮಾನದಲ್ಲಿ ಕುಳಿತಾಗ ಏನೇನು ಕನಸು ಕಂಡಿದ್ದೆ. ಸೌದಿ ಅರೇಬಿಯಾದಲ್ಲಿ ಒಂದು ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಕಾರ್ಮಿಕನಾಗಿ ಸೇರಿಕೊಂಡೆ. ಮಿಕ್ಸಿಂಗ್ ಮಾಡಿದ ಸಿಮೆಂಟನ್ನು 20 ಮಹಡಿಗಳ ಕಟ್ಟಡಕ್ಕೆ ಹೊತ್ತುಕೊಂಡು ಹೋಗಬೇಕಿತ್ತು. ರಾತ್ರಿ ಬೇರೊಂದು ಕೆಲಸ ಮಾಡಿದೆ. ಆದರೆ ಮೂರು ತಿಂಗಳಲ್ಲಿ ಆ ಕಂಪೆನಿ ಮುಚ್ಚಿತು. ಆಗ ನವ ಮಂಗಳೂರು ಬಂದರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದ ಡ್ರೆಜ್ಜಿಂಗ್ ಕಂಪೆನಿ ಸೌದಿ ಅರೇಬಿಯಾದಲ್ಲಿ ಕಾರ್ಯಾರಂಭಗೊಂಡಿತು. ಹಿಂದಿನ ಪರಿಚಯದ ಮೂಲಕ ಅಲ್ಲಿ ಉದ್ಯೋಗ ಸಿಕ್ಕಿತು. ಐದು ವರ್ಷ ಅಲ್ಲಿ ದುಡಿದೆ. 1985ರಲ್ಲಿ ಅದೇ ಕಂಪೆನಿ ಇಂಡಸ್ಟ್ರಿಯಲ್ ಸರ್ವಿಸ್ ಆರಂಭಿಸಿತು. ನೆದರ್‌ಲ್ಯಾಂಡ್‌ನ ಶೂನ್ಯ ಆಮ್ಲಜನಕ ಪ್ರದೇಶದಲ್ಲಿ ತರಬೇತಿಯು ಬದುಕು ಬದಲಿಸಿತು. ಕಂಪೆನಿಯಲ್ಲಿ 30 ವರ್ಷ ಬದ್ಧತೆಯಿಂದ ಕೆಲಸ ಮಾಡಿದೆ ಎಂದು ಅವರು ಹೇಳಿದರು.
7 ಸಾವಿರ ನೌಕರರು: 2010ರಲ್ಲಿ ದುಬೈನಲ್ಲಿ ನಾಲ್ಕು ಮಂದಿ ಸೇರಿ ನಮ್ಮದೇ ಮುಝೈನ್ ಸಂಸ್ಥೆ ಆರಂಭಿಸಿದೆವು. ಅವತ್ತು ಆರಂಭಿಸಿದ ಅಲ್ ಮುಝೇನ್ ಸಂಸ್ಥೆ ದೊಡ್ಡ ಉದ್ಯಮವಾಗಿ ಬೆಳೆದಿದೆ. 7 ಸಾವಿರಕ್ಕೂ ಅಧಿಕ ಮಂದಿ ನೌಕರರು ಈ ಸಂಸ್ಥೆಯಲ್ಲಿದ್ದಾರೆ. ಏಳು ಸಾವಿರ ಮಂದಿ ಕಾರ್ಮಿಕರಲ್ಲಿ ಹೆಚ್ಚಿನವರು ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಜಿಲ್ಲೆಯವರೇ ಇದ್ದಾರೆ ಎಂದರು.
ಸುರಕ್ಷೆ, ಗುಣಮಟ್ಟ ಮತ್ತು ಬದ್ಧತೆಗೆ ಆದ್ಯತೆ ನೀಡಿದ್ದರಿಂದ ಸಂಸ್ಥೆ ಯಶಸ್ವಿಯಾಗಿ ಬೆಳೆದಿದೆ. ನಮ್ಮ ಸಂಸ್ಥೆಯಲ್ಲಿ ದುಡಿಯುವವರು ನನ್ನ ಪಾಲಿಗೆ ಸಂಸ್ಥೆಯ ಪಾಲುದಾರರು. ಸಂಸ್ಥೆಯ ಯಶಸ್ಸಿಗೆ ಕಾರಣ ಎಂದರು.
ದಾನ ಧರ್ಮ ಎತ್ತರಕ್ಕೆ ಬೆಳೆಸಿದೆ: ನಾನು ಮಾಡಿದ ದಾನ ಸೇವಾ ಕಾರ್ಯಗಳು ನನ್ನನ್ನು ಎತ್ತರಕ್ಕೆ ಬೆಳೆಸಿದೆ. ಈ ಸಮಾಜ ಸೇವಾ ಕಾರ್ಯಗಳಿಗಾಗಿ ಭಗವಂತನು ನನಗೆ ಉತ್ತಮ ಆರೋಗ್ಯ ಕೊಟ್ಟಿದ್ದಾನೆ. ಕಷ್ಟದ ದಿನಗಳು ಸಂಯಮ ಕಲಿಸಿವೆ ಎಂದು ಬಣ್ಣಿಸಿದರು.
ಪ್ರತಿ ಮೂರು ತಿಂಗಳಿಗೆ ನನ್ನ ಸಂಸ್ಥೆಯಲ್ಲಿ ಸಿಬ್ಬಂದಿಯ ನೇಮಕಾತಿ ನಡೆಯುತ್ತಿದೆ. ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿರುವ ಅರ್ಹರನ್ನು ಅಧ್ಯಕ್ಷರು ಕಳುಹಿಸಿಕೊಟ್ಟರೆ ಅವರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದರು.
ರಾಮಚಂದ್ರ ಭಂಡಾರ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷ ಮುಹಮ್ಮದ್ ಆರಿಫ್ ಕಾರ್ಯಕ್ರಮ ನಿರೂಪಿಸಿ , ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
‘‘ಉದ್ಯೋಗಾಕಾಂಕ್ಷಿಗಳಿಗಾಗಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ತೆರೆಯುವ ಯೋಜನೆ ಇದೆ. ಸೌದಿ ಅರೇಬಿಯಾದಲ್ಲಿ ಯೆನೆಪೋಯ ಸಂಸ್ಥೆ ಸಹಯೋಗದಲ್ಲಿ ಶಿಕ್ಷಣ ಸಂಸ್ಥೆ, ಬ್ಯಾಸ್ಕೆಟ್‌ಬಾಲ್ ಅಕಾಡೆಮಿ, ಲಂಡನ್‌ನಲ್ಲಿ ವೈದ್ಯಕೀಯ ಸಂಸ್ಥೆ ಆರಂಭಿಸಲಿದ್ದೇವೆ.
-ಝಕರಿಯಾ ಜೋಕಟ್ಟೆ , ಸಿಇಒ, ಅಲ್ ಮುಝೈನ್ ಕಂಪೆನಿ







