ಖತರ್, ಬಹರೈನ್ ವಾಯುಪ್ರದೇಶ ಬಂದ್| ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿ

ಮಂಗಳೂರು, ಜೂ. 23: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಖತರ್ ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ದಾಳಿ ನಡೆದಿದ್ದು, ಈ ಘಟನೆಯ ಬಳಿಕ ಖತರ್, ಬಹರೈನ್ ವಾಯುಪ್ರದೇಶ ಮುಚ್ಚಲಾಗಿದೆ. ಇದರಿಂದಾಗಿ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ.
ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನಗಳ ಸ್ಥಿತಿಯ ಕುರಿತು ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಸಂಜೆಯ ನಿರ್ಗಮನ: ದಮಾಮ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಗಿದೆ. ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈನಲ್ಲಿ ಇಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ದಮಾಮ್ ಗೆ ಹೋಗುತ್ತಿದ್ದ ವಿಮಾನವನ್ನು ಮಸ್ಕತ್ ನಲ್ಲಿ ಇಳಿಸಲಾಗಿದ್ದು ಪ್ರಯಾಣಿಕರು ವಿಮಾನದಲ್ಲೇ ಇದ್ದಾರೆ. ಅವರಿಗೆ ವಿಮಾನದಿಂದ ಇಳಿಯಲು ಅನುಮತಿ ಸಿಕ್ಕಿಲ್ಲ. ಅನುಮತಿ ಸಿಕ್ಕಿದರೆ ಅಲ್ಲಿ ಪ್ರಯಾಣಿಕರನ್ನು ಇಳಿಸಲಾಗುವುದು, ಇಲ್ಲದಿದ್ದರೆ ಇಂಧನ ತುಂಬಿಸಿ ವಿಮಾನ ಮಂಗಳೂರಿಗೆ ವಾಪಸ್ ಬರುವ ಸಾಧ್ಯತೆಯಿದೆ ಎಂದು ವಿಮಾನದಲ್ಲಿರುವ ಪ್ರಯಾಣಿಕರೊಬ್ಬರು ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.







