ಅಶ್ರಫ್, ರಹ್ಮಾನ್ ಕೊಲೆ ಪ್ರಕರಣಗಳು| ವಿಶೇಷ ಸರಕಾರಿ ಅಭಿಯೋಜಕರಾಗಿ ಹಿರಿಯ ನ್ಯಾಯವಾದಿ ಬಾಲನ್ ನೇಮಕ?

(ಅಶ್ರಫ್, ರಹ್ಮಾನ್, ಎಸ್. ಬಾಲನ್)
ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪದ ಸಾಮ್ರಾಟ್ ಮೈದಾನದಲ್ಲಿ ಎ. 27ರಂದು ಗುಂಪು ಥಳಿತದಿಂದ ಹತ್ಯೆಗೀಡಾದ ಕೇರಳದ ವಯನಾಡಿನ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಮತ್ತು ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ದುಷ್ಕರ್ಮಿಗಳಿಂದ ಮೇ 27ರ ಸಂಜೆ ಹತ್ಯೆಯಾದ ಬಡಗ ಬೆಳ್ಳೂರು ಗ್ರಾಮದ ಕೊಳತ್ತಮಜಲಿನ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯವಾದಿ ಎಸ್.ಬಾಲನ್ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸುವ ಬಗ್ಗೆ ತಿಳಿದು ಬಂದಿದೆ.
ಹತ್ಯೆಯಾದ ಇಬ್ಬರ ಕುಟುಂಬದ ಸದಸ್ಯರು ಪ್ರಕರಣದ ಸಮಗ್ರ ತನಿಖೆ ನಡೆದು ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು. ಅದಕ್ಕಾಗಿ ಎರಡೂ ಕೊಲೆಗಳ ವಿಚಾರಣೆಯಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಎಸ್.ಬಾಲನ್ರನ್ನು ಅವರನ್ನು ನೇಮಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಗೃಹ ಮತ್ತು ಕಾನೂನು ಸಚಿವರಲ್ಲಿ ಚರ್ಚಿಸಿ, ಮನವಿ ಮಾಡಿದ್ದರು. ಆ ಹಿನ್ನಲೆಯಲ್ಲಿ ಸರಕಾರವು ಎಸ್. ಬಾಲನ್ರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸುವ ಬಗ್ಗೆ ಪರಿಶೀಲಿಸುತ್ತಿದೆ ಎನ್ನಲಾಗಿದೆ.
ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಸಹಿತ 21 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಕೆಲವರು ಜಾಮೀನು ಪಡೆದರೆ ಇನ್ನು ಕೆಲವರು ಜೈಲಲ್ಲಿದ್ದಾರೆ.