ಹರೇಕಳ: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಆರಂಭ

ಕೊಣಾಜೆ: ವ್ಯಕ್ತಿ ಶಿಕ್ಷಣ ಪಡೆದರೆ ಆರೋಗ್ಯವೂ ಚೆನ್ನಾಗಿರುತ್ತದೆ, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಆಧಾರಸ್ತಂಭ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು ಸ್ವಸಮೀಕ್ಷೆ ವಿಭಾಗಗಳ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ಹರೇಕಳ ಅನುದಾನಿತ ಶ್ರೀ ರಾಮಕೃಷ್ಣ ಪ್ರೌಡಶಾಲೆಗೆ ನಿಟ್ಟೆ ಎಜುಕೇಶನ್ ಟ್ರಸ್ಟ್ ವತಿಯಿಂದ ನೀಡಲ್ಪಟ್ಟ ಉಚಿತ ಬಸ್ ಸೇವೆಗೆ ಸೋಮವಾರ ನಡೆದ ಚಾಲನೆ ನೀಡಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾಲಯ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದೆ. 22 ಗ್ರಾಮೀಣ ಆರೋಗ್ಯ ಕೇಂದ್ರಗಳು, 22 ಆರೋಗ್ಯ ಕೇಂದ್ರಗಳಲ್ಲಿ ಪ್ರತಿವರ್ಷ ಎರಡು ಲಕ್ಷ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. 20ರಿಂದ 25 ಸಾವಿರ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ನೀಡಿ ಸಮಾಜಕ್ಕೆ ಸಮರ್ಪಿಸುತ್ತಿದೆ. ಏಳು ಬಸ್ಸುಗಳನ್ನು ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಮೀಸಲಿಡ ಲಾಗಿದೆ ಎಂದು ತಿಳಿಸಿದರು.
ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ ಮಾತನಾಡಿ, ಶಿಕ್ಷಣದ ವಿಚಾರ ಬಂದಾಗ ವಿನಯ್ ಹೆಗ್ಡೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿದ್ದು ದೇಶದ ಭವಿಷ್ಯ ರೂಪಿಸುವ ಬಗ್ಗೆ ಇಂದೇ ಪ್ರತಿಜ್ಞೆ ಮಾಡಬೇಕು ಎಂದು ತಿಳಿಸಿದರು.
ಪಾವೂರು ಹರೇಕಳ ತ್ರಿ ಶಕ್ತಿ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಕಳ್ಳಿಮಾರ್
ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಕೊಣಾಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಮೋಹಿನಿ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ರವಿಶಂಕರ್,ಕುಮುದ, ಕೃಷ್ಣಶಾಸ್ತ್ರೀ, ಶಿವಣ್ಣ, ಸ್ಮಿತಾ ಸಹಕರಿಸಿದರು .
"ಅನುದಾನಿತ ಶಾಲೆಗಳು ಶಿಕ್ಷಕರ ಕೊರತೆಗಳಿಂದ ಬಳಲುತಿದೆ. ಶಿಕ್ಷಕರ ಕೊರತೆಗಳಿಂದಾಗಿ ಹಲವಾರು ಅನುದಾನಿತ ಸಂಸ್ಥೆಗಳು ಮುಚ್ಚುತ್ತಿವೆ. ಆದರೆ ಶತಮಾನಗಳನ್ನು ಕಂಡುಕೊಂಡಿರುವ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ನವರು ಶಾಲೆಗೆ ಉಚಿತ ವಾಗಿ ಬಸ್ಸಿನ ವ್ಯವಸ್ಥೆ ಯನ್ನು ಕಲ್ಪಿಸಿ ಕೊಟ್ಟದ್ದಕ್ಕೆ ಊರಿನವರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ".
-ಕೆ ಎನ್ ಆಳ್ವ, ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರು