ಕರಾವಳಿಯಲ್ಲಿ ವಿದ್ಯಾರ್ಥಿ ಚಳವಳಿಯ ನಾಶ ಕೋಮುವಾದ ಬೆಳೆವಣಿಗೆಗೆ ಕಾರಣ: ಡಾ. ಗಣನಾಥ ಶೆಟ್ಟಿ ಎಕ್ಕಾರು
DYFI ಮುಖಂಡ ಶ್ರೀನಿವಾಸ್ ಬಜಾಲ್ ಅವರ 23ನೇ ವರ್ಷದ ಹುತಾತ್ಮ ದಿನ

ಮಂಗಳೂರು: ಕರಾವಳಿಯಲ್ಲಿ ವಿದ್ಯಾರ್ಥಿ ಚಳವಳಿಯ ನಾಶ ಕೋಮುವಾದ ಬೆಳೆಯಲು ಕಾರಣವಾ ಯಿತು ಎಂದು ಜನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು ತಿಳಿಸಿದ್ದಾರೆ.
ಬಲಪಂಥೀಯ ಸಂಘಟನೆಯ ಗೂಂಡಾಗಳಿಂದ ಹತ್ಯೆಯಾದ ಡಿವೈಎಫ್‌ಐ ಮುಖಂಡ ಶ್ರೀನಿವಾಸ್ ಬಜಾಲ್ ಹತ್ಯೆಯಾಗಿ 23 ವರ್ಷ ಸಂದಿರುವ ಸಂದರ್ಭ ಅವರ ನೆನಪಲ್ಲಿ ಮಂಗಳವಾರ ನಗರದ ಸಹೋದಯ ಸಭಾಂಗಣದಲ್ಲಿ ‘ತುಳುನಾಡಿನ ಸೌಹಾರ್ದ ಪರಂಪರೆ , ಕೋಮುವಾದ ಒಡ್ಡಿರುವ ಸವಾಲುಗಳು’ ಎಂಬ ವಿಷಯದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣದಲ್ಲಿ ವಿಚಾರ ಮಂಡಿಸಿದರು.
1970-80ರ ದಶಕದಲ್ಲಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ಆಗುತ್ತಿತ್ತು. ಆದರೆ ಅದರಲ್ಲಿ ಕೋಮುವಾದ ಇರಲಿಲ್ಲ. ರಾಜಕೀಯ ಮೇಲಾಟ ಇತ್ತು. ಆದರೆ ಈ ಗಲಾಟೆ ವ್ಯಕ್ತಿತ್ವ ನಾಶ ಮಾಡುವಷ್ಟು ಇರಲಿಲ್ಲ ಎಂದು ವಿವರಿಸಿದರು.
ವಿದ್ಯಾರ್ಥಿ ಚಳವಳಿಯ ನಾಶ ಕೋಮುವಾದಕ್ಕೆ ಎಡೆ ಮಾಡಿಕೊಟ್ಟಿತು. ದ.ಕ, ಉಡುಪಿ ಜಿಲ್ಲೆಯಲ್ಲಿ ಪ್ರಗತಿಪರ ವಿದ್ಯಾರ್ಥಿಗಳ ಸಂಘಟನೆಗಳು ವೀಕ್ ಆಗಿದೆ ಎಂದರು.
ಕೋಮುವಾದಕ್ಕೆ ಹೆಚ್ಚು ಬಲಿಯಾದವರು ವಿದ್ಯಾರ್ಥಿಗಳು ಮತ್ತು ಯುವ ಜನರು. ಹಿಂದೆ ಕರಾವಳಿ ಸೇರಿ ದಂತೆ ಕರ್ನಾಟಕವನ್ನು ಅಬಕಾರಿ ಮಾಫಿಯಾ ಕಂಟ್ರೋಲ್ ಮಾಡುತ್ತಿತ್ತು. ಈಗ ಶಿಕ್ಷಣ ಮಾಫಿಯಾ ಎಲ್ಲವನ್ನು ಕಂಟ್ರೋಲ್ ಮಾಡುತ್ತಿದೆ. ಶಿಕ್ಷಣ ಮಾಫಿಯಾ ಎಲ್ಲ ವಿದ್ಯಾರ್ಥಿ ಚಳವಳಿ ಸೇರಿದಂತೆ ಎಲ್ಲವನ್ನು ನಾಶ ಮಾಡಿದೆ ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಕೇಂದ್ರಗಳನ್ನು ರಾಜಕೀಯ ಕೇಂದ್ರಗಳಾಗಿ ಬಳಕೆ ಮಾಡುವ ಪ್ರಯತ್ನ ಮಾಡಿದ್ದು, ಧಾರ್ಮಿಕ ಕೇಂದ್ರದಲ್ಲಿ ಹಿಂದೆ ಇದ್ದವರು ರಾಜಕೀಯವಾಗಿ ಗುರುತಿಸಿಕೊಂಡವರಲ್ಲ. ಧಾರ್ಮಿಕ-ರಾಜಕೀಯ ನಾಯ ಕರ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಅವರವರ ಕೆಲಸ ಮಾಡುತ್ತಿದ್ದರು. ಬಳಿಕ ಧಾರ್ಮಿಕ ಕೇಂದ್ರದ ನಾಯಕರನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದು, ಅವರಿಗೆ ಅಧಿಕಾರ ನೀಡಲು ಆರಂಭ ಮಾಡಿದ್ದು ಪರೋಕ್ಷವಾಗಿ ಕೋಮುವಾದ ಬೆಳೆಯಲು ಪರೋಕ್ಷ ಕಾರಣವಾಯಿತು ಎಂದರು.
ಆಡಳಿತಗಾರರನ್ನು ಎಚ್ಚರಿಸಬೇಕಾದ ಮಾಧ್ಯಮಗಳು ತನ್ನ ಜವಾಬ್ದಾರಿಯನ್ನು ಮರೆತು ಏಕಪಕ್ಷೀಯ ವಾಗಿ ನಡೆದುಕೊಂಡ ಕಾರಣದಿಂದಾಗಿ ತುಳುನಾಡಿನಲ್ಲಿ ಕೋಮುವಾದ ಬೆಳೆಯಿತು. ಕರವಳಿಯಲ್ಲಿ ಕೋಮುವಾದ ಬೆಳೆಯಲು ಮಾಧ್ಯಮಗಳ ಕೊಡುಗೆ ಅಪಾರ ಎಂದು ವಿಶ್ಲೇಷಿದರು.
ಇವತ್ತು ತುಳುನಾಡಿನಲ್ಲಿ ಕೋಮುವಾದವನ್ನು ನಿಯಂತ್ರಿಸಲು ಸಂಸ್ಕೃತಿಯ ಮೂಲಕ ಸಾಮರಸ್ಯವನ್ನು ಬೆಳೆಸುವ ಪ್ರಯತ್ನ ಅಗತ್ಯ. ತುಳುನಾಡಿನ ಮೂಲಸಂಸ್ಕೃತಿಯ ಅರಿವನ್ನು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ವೈಚಾರಿಕವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಬೇಕು ಮತ್ತು ಯುವಜನರಿಗೆ ಸೈದ್ಧಾಂತಿಕ ತರಬೇತಿ ನೀಡಬೇಕಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಕೋಮುವಾದಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಪರಿಹಾರ ಅಗತ್ಯ. ಇವತ್ತು ದ.ಕ. ಜಿಲ್ಲೆಗೆ ಇಬ್ಬರು ಉತ್ತಮ ಐಪಿಎಸ್ ಅಧಿಕಾರಿಗಳು ಸಿಕ್ಕಿದ್ದಾರೆ. ಅವರ ಮೇಲೆ ಸೃಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಅರೋಪಗಳಿಲ್ಲ. ಹೀಗಾಗಿ ಅವರಲ್ಲಿ ಉತ್ತಮ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಆದರೆ ಅವರು ಕೈಗೊಂಡಿರುವ ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವ ನಿರ್ಧಾರದಿಂದ ಈಗಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವೆ ? ಎಂದು ಯೋಚಿಸಬೇಕಾಗಿದೆ. ಕೋಮವಾದಿಗಳನ್ನು ಹತ್ತಿಕ್ಕುವ ಬರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಡಿವೈಎಫ್‌ಐ ಮಾಜಿ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಕೋಮುವಾದ ಸಮಸ್ಯೆ ಮತ್ತು ಬದುಕಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ ಇಮ್ತಿಯಾಝ್‌ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ಕಾರ್ಯದರ್ಶಿ ದ.ಕ. ಸಂತೋಷ್ ಬಜಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮನೋಜ್ ವಾಮಂಜೂರು ವಿಮೋಚನಾ ಗೀತೆ ಹಾಡಿದರು.







