ಬಂಟ್ವಾಳ| ಇಡ್ಕಿದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಅಮಾನತು
ಗ್ರಾ.ಪಂ. ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ ಆರೋಪ

ಗೋಕುಲ್ ದಾಸ್ ಭಕ್ತ
ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ ಆರೋಪದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ಅವರನ್ನು ಅಮಾನತು ಮಾಡಿ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಜೂ.23ರಂದು ಇಡ್ಕಿದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಾಜಕೀಯ ಪಕ್ಷವೊಂದರ ಸಭೆಯನ್ನು ನಡೆಸಲು ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮವನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆಯನ್ನು ತೋರಿರುವ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಅವರು ಅಭಿವೃದ್ಧಿ ಅಧಿಕಾರಿಗೆ ಕಾರಣ ಕೇಳಿ ನೋಟಿಸು ನೀಡಿದ್ದು, ಸದರಿ ನೋಟಿಸಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಿರುವುದು ತನ್ನ ಗಮನಕ್ಕೆ ಬಂದಿರುವುದಿಲ್ಲ ಎಂಬುದಾಗಿ ಸಮಜಾಯಿಷಿಯನ್ನು ನೀಡಿರುತ್ತಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಡಿರುವ ಸಮಜಾಯಿಷಿಕೆಯು ಒಪ್ಪತಕ್ಕದ್ದಲ್ಲ. ಸರ್ಕಾರಿ ಕಚೇರಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಅವಕಾಶ ನೀಡುವುದು ಸಮಂಜಸವಲ್ಲ. ಇದಕ್ಕೆ ಅವಕಾಶ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬ ಉಲ್ಲೇಖದಂತೆ, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್ ಬಂಟ್ವಾಳ ಇವರು ವರದಿ ಸಲ್ಲಿಸಿದ್ದರು.
ವರದಿಯನುಸಾರ ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ದಾಸ್ ಭಕ್ತರನ್ನು ಕರ್ನಾಟಕ ಸರಕಾರಿ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 10ನೇ ನಿಯಮದ (1)(ಡಿ) ಉಪನಿಯಮದಂತೆ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಶಿಸ್ತು ಪ್ರಾಧಿಕಾರವು ತೀರ್ಮಾನಿಸಿ ಆದೇಶ ಹೊರಡಿಸಿದೆ.







