ಸಹಕಾರ ಸಪ್ತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಪರಿಸರ ಚಿತ್ರಕಲಾ, ಭಾಷಣ ಸ್ಪರ್ಧೆ

ಪಡುಬಿದ್ರಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಪ್ರತಿಭೆಯನ್ನು ಸದ್ಬಳಕೆಮಾಡಿಕೊಳ್ಳಬೇಕು. ಈ ಮೂಲಕ ನಿಮ್ಮ ಭವಿಷ್ಯವು ನಿಮಗಾಗಿ ಕಾದಿರುತ್ತದೆ ಎಂದು ನಿವೃತ್ತ ಶಿಕ್ಷಕ ಜಿನರಾಜ್ ಪಿ. ಸಾಲ್ಯಾನ್ ಹೇಳಿದರು.
ಅವರು ಗುರುವಾರ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ ಪಡುಬಿದ್ರಿಯ ಸಹಕಾರ ಸಂಗಮದ ಸಭಾಂಗಣದಲ್ಲಿ ಆಯೋಜಿಸಲಾದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪರಿಸರದ ಕುರಿತಾದ ಚಿತ್ರಕಲಾ ಹಾಗೂ ಭಾಷಣ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ನಡೆಯುವ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮಾಲಿನ್ಯ ಮುಕ್ತ ಪರಿಸರ ನಮ್ಮೆಲ್ಲರ ಹಕ್ಕು ಎಂಬುದನ್ನು ನಾವು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಜಗತ್ತನ್ನು ನಿರ್ಮಿಸಲು ಸಾಧ್ಯ ಎಂಬ ಧ್ಯೇಯದೊಂದಿಗೆ "ಪರಿಸರ ಮಾಲಿನ್ಯ ತಡೆಯಿರಿ ಆರೋಗ್ಯಕರ ಸಮಾಜವನ್ನು ನಿರ್ಮಿಸಿ ಕಾರ್ಯಕ್ರಮ ದಡಿ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ಕಾರ್ಯಕ್ರಮಕ್ಕೆ ಒತ್ತುಕೊಟ್ಟು ನಡೆಸುತ್ತಿರುವ ಈ ವಿದ್ಯಾರ್ಥಿ ಗಳಿಗಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ವೇದಿಕೆಯಲ್ಲಿ ಪಡುಬಿದ್ರಿ ಸಹಕಾರಿ ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್. ಪುತ್ರನ್, ಯುವವಾಹಿನಿ ಪಡುಬಿದ್ರಿ ಘಟಕಾಧ್ಯಕ್ಷ ಶಶಿಕಲಾ ವೈ. ಪೂಜಾರಿ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ., ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ., ಉಡುಪಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷ - 2025ರ ಸಹಕಾರ ಪರ್ವ ಕಾರ್ಯಕ್ರಮದಲ್ಲಿ ಯುವವಾಹಿನಿಯ ಪಡುಬಿದ್ರಿ ಘಟಕದ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರದ 26ಶಾಲಾ, ಕಾಲೇಜುಗಳ 172 ವಿದ್ಯಾರ್ಥಿಗಳು ಭಾಷಣ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು.
ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ನಿಖಿಲ್ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾ„ಕಾರಿ ಅನುಷಾ ಕೋಟ್ಯಾನ್ ವಂದಿಸಿದರು.







