ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ

ಮಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿರುವುದರ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರಕಾರವು ರೈತ ಕಾರ್ಮಿಕ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಗುರುವಾರ ರಾಜ್ಯಾದ್ಯಂತ ನಡೆದ ಪ್ರತಿಭಟನೆಗೆ ಪೂರಕವಾಗಿ ನಗರದ ಕ್ಲಾಕ್ ಟವರ್ ಬಳಿ ಸಮಾನ ಮನಸ್ಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ನಾಯಕರಾದ ಕೆ. ಯಾದವ ಶೆಟ್ಟಿ ಮಾತನಾಡಿ ಮಣ್ಣಿನ ಮಗ, ರೈತನ ಮಗನೆಂದು ರೈತರ ಹೆಸರಿನಲ್ಲಿ ರಾಜಕಾರಣ ನಡೆಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಮುಲಾಜಿಲ್ಲದೆ ರೈತರ ಭೂಮಿಯನ್ನು ಕಬಳಿಸಲು ಹೊರಟಿದೆ. ಸುಮಾರು 1180 ದಿನಗಳಿಂದ ನಿರಂತರವಾಗಿ ಹೋರಾಟ ದಲ್ಲಿ ನಿರತರಾದ ರೈತರ ಬಳಿ ಮಾತನಾಡುವ ಕನಿಷ್ಠ ಸೌಜನ್ಯವೂ ರಾಜ್ಯ ಸರಕಾರಕ್ಕಿಲ್ಲದೆ ಇರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ ಎಂದರು.
ಎಐಟಿಯುಸಿ ನಾಯಕ ಬಿ. ಶೇಖರ್ ಮಾತನಾಡಿ ನಾಡಿಗೆ ಅನ್ನ ನೀಡುವ ರೈತರ ಸಂಕಷ್ಟವನ್ನು ಅರಿ ಯದ ಕಾಂಗ್ರೆಸ್ ಸರಕಾರ ರಾಜ್ಯದ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲು ಭಾರೀ ಉತ್ಸುಕ ವಾಗಿದೆ. ದೇಶದ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ತುತ್ತೂರಿ ಬಾರಿಸುವುದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಬೀದಿಗಿಳಿದ ದೇವನಹಳ್ಳಿಯ ರೈತರು ತಮ್ಮ ಭೂಮಿಯ ರಕ್ಷಣೆಗಾಗಿ ಬಿಜೆಪಿ ಸರಕಾರದ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರಕಾರವು ಬಿಜೆಪಿ ಮಾಡಿದ ರೈತ ವಿರೋಧಿ ತೀರ್ಮಾನವನ್ನು ಧಿಕ್ಕರಿಸಿ ರೈತರಿಗೆ ನ್ಯಾಯ ನೀಡುವ ಬದಲು ಅದೇ ತೀರ್ಮಾನವನ್ನು ಮುಂದುವರಿಸಿದೆ. ರೈತರ ಭೂಮಿಯ ವಿಷಯದಲ್ಲಿ ಕಾಂಗ್ರೆಸ್‌ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ರೈತ ಸಂಘದ ನಾಯಕ ಸನ್ನಿ ಡಿಸೋಜ, ಸಿಐಟಿಯು ನಾಯಕ ಸುಕುಮಾರ್ ತೊಕ್ಕೊಟ್ಟು, ಎಐಟಿಯುಸಿ ನಾಯಕ ಸೀತಾರಾಮ ಬೇರಿಂಜ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಅಶೋಕ್ ಶ್ರೀಯಾನ್, ನಾಗೇಶ್ ಕೊಟ್ಯಾನ್, ಇಬ್ರಾಹಿಂ ಮದಕ, ಎಐಟಿಯುಸಿ ಮುಖಂಡ ರಾದ ವಿ. ಕುಕ್ಯಾನ್, ಪ್ರಭಾಕರ್ ರಾವ್, ತಿಮ್ಮಪ್ಪ ಕಾವೂರು, ಕೃಷ್ಣಪ್ಪಭಾಸ್ಕರ್, ಎಐಕೆಎಸ್ ನಾಯಕ ರಾದ ಕೃಷ್ಣಪ್ಪಸಾಲ್ಯಾನ್, ಸದಾಶಿವದಾಸ್, ಶೇಖರ್ ಕುಂದರ್, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ಮುಖಂಡರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ತಯ್ಯುಬ್ ಬೆಂಗರೆ, ರಾಜ್ಯ ರೈತ ಸಂಘದ ಸ್ಟೀವನ್ ಡಿಸೋಜ, ಮಹಿಳಾ ಸಂಘಟನೆಯ ನಾಯಕಿಯರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಅಸುಂತ ಡಿಸೋಜ, ಮಾಧುರಿ ಬೋಳಾರ, ಜಯಲಕ್ಷ್ಮಿ, ದಲಿತ ಸಂಘಟನೆಯ ನಾಯಕರಾದ ಸದಾಶಿವ ಪಡುಬಿದ್ರೆ, ಕಮಲಾಕ್ಷ ಬಜಾಲ್, ತಿಮ್ಮಯ್ಯ ಕೊಂಚಾಡಿ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಶೇಖರ್ ವಾಮಂಜೂರು, ಕರಿಯ ಕೆ, ಬೀದಿಬದಿ ವ್ಯಾಪಾರಸ್ಥರ ಸಂಘದ ಹಸನ್ ಕುದ್ರೋಳಿ, ವಿಜಯ ಜೈನ್,ಮುಝಫರ್ ಅಹ್ಮದ್ ಉಪಸ್ಥಿತರಿದ್ದರು.







