ಕೃಷ್ಣಾಪುರ: ಚೈತನ್ಯ ಪಬ್ಲಿಕ್ ಶಾಲೆಯ ಶಿಕ್ಷಕ-ರಕ್ಷಕ ಸಭೆ

ಮಂಗಳೂರು: ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ರಕ್ಷಕರ ಪಾತ್ರ ಮಹತ್ವದ್ದು. ಮಕ್ಕಳನ್ನು ಮೊಬೈಲ್ ಫೋನ್ ಅತೀ ಬಳಕೆಯಿಂದ ದೂರವಿರಿಸುವುದು, ಇನ್ನೊಬ್ಬರ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ತುಲನೆ ಮಾಡದಿರುವುದು, ಮಕ್ಕಳು ತಪ್ಪು ಮಾಡಿದ್ದಲ್ಲಿ ಅದನ್ನು ವೈಭವೀಕರಿಸದೆ, ಅವರನ್ನು ಕ್ಷಮಿಸಿ, ಅವರಿಗೆ ತಪ್ಪಿನ ಮನವರಿಕೆ ಮಾಡಿಕೊಡುವುದು, ಅವರ ಪ್ರತಿಭೆ ಮತ್ತು ಆಸಕ್ತಿಗಳನ್ನು ಗುರುತಿಸಿ ಅವುಗಳ ವಿಕಸನಕ್ಕಾಗಿ ಪ್ರೋತ್ಸಾಹಿಸುವುದರ ಜೊತೆಗೆ ಅಂಕಗಳ ಭ್ರಮೆಯಿಂದ ಹೊರಬರುವುದು ಮುಂತಾದ ಗುಣಗಳನ್ನು ಪೋಷಕರು ಬೆಳೆಸಿಕೊಂಡಲ್ಲಿ ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸಬಹುದು ಎಂದು ಪತ್ರಕರ್ತ ದಾಯ್ಜಿವರ್ಲ್ಡ್ ಮೀಡಿಯಾದ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.
ಅವರು ಇತ್ತೀಚೆಗೆ ಕೃಷ್ಣಾಪುರ ಚೈತನ್ಯ ಪಬ್ಲಿಕ್ ಶಾಲೆಯ ಶಿಕ್ಷಕ-ರಕ್ಷಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಶಾಲೆಯು ಕಳೆದ 11 ವರ್ಷಗಳಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿರುವುದನ್ನು ವಾಲ್ಟರ್ ನಂದಳಿಕೆ ಶ್ಲಾಘಿಸಿದರು.ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ ಮುಖ್ಯ ಅತಿಥಿಯಾಗಿದ್ದರು. ಶಾಲಾಡಳಿತ ಮಂಡಳಿಯ ಅಧ್ಯಕ್ಷ ಕೆ.ಎ. ಖಾದರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶಾಲಾಡಳಿತ ಮಂಡಳಿಯ ಸಂಚಾಲಕಎಂ.ಎ ಹನೀಫ್, ಕಾರ್ಯದರ್ಶಿ ಶೇಖ್ ಅಹ್ಮದ್, ಪದಾಧಿಕಾರಿಗಳಾದ ಮುಹಮ್ಮದ್ ಅಲಿ ಮತ್ತು ದಿಲೀಪ್ ಹಾಗೂ ಶಿಕ್ಷಕ –ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಾ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಶಶಿಕಲಾ ಶಾಲೆಯ ನಿಯಾಮವಳಿಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.
ಶಿಕ್ಷಕಿ ಸುನಿತಾ ಸ್ವಾಗತಿಸಿದರು. ಡಿಂಪಲ್ ವಂದಿಸಿದರು. ಶಿಕ್ಷಕಿ ಕಸ್ತೂರಿ ಕಾರ್ಯಕ್ರಮ ನಿರೂಪಿಸಿದರು.







