ಪುತ್ತೂರು| ಬೈಕ್ - ರಿಕ್ಷಾ ನಡುವೆ ಅಪಘಾತ; ಏಳು ಮಂದಿಗೆ ಗಾಯ

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಅಟೋ ರಿಕ್ಷಾಕ್ಕೆ ಢಿಕ್ಕಿಯಾದ ಪರಿಣಾಮ ಏಳು ಮಂದಿ ಗಾಯಗೊಂಡ ಘಟನೆ ಉರ್ಲಾಂಡಿ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಬೈಕ್ ಸವಾರ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ, ರಿಕ್ಷಾ ಪಲ್ಟಿಯಾಗಿ ಐದು ವರ್ಷದ ಮಗು ಸೇರಿದಂತೆ ರಿಕ್ಷಾದಲ್ಲಿದ್ದ ಸಾಲೆತ್ತೂರು ನಿವಾಸಿಗಳಾದ ಮೊಹಮ್ಮದ್ ತಮೀಮ್ (5), ಹಮೀದ್ (40), ಇಸ್ಮಾಯಿಲ್ (45), ಇಬ್ರಾಹಿಂ (65), ಸಮೀರ್ (34), ಸುಲೈಮಾನ್ (26) ಹಾಗೂ ಸ್ಥಳೀಯ ಸ್ಟುಡಿಯೋವೊಂದರಲ್ಲಿ ಕಾರ್ಯನಿರ್ವಹಿಸುವ ಬೈಕ್ ಸವಾರ ಗಾಯಗೊಂಡಿದ್ದಾರೆ.
ಅವರು ಅಟೋ ರಿಕ್ಷಾದಲ್ಲಿ ಕೂರತ್ ನಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಇದೇ ವೇಳೆ ನಗರದಿಂದ ದರ್ಬೆ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ತನ್ನ ಬೈಕನ್ಮು ಉರ್ಲಾಂಡಿ ಸಮೀಪದ ಒಳರಸ್ತೆಯಿಂದ ಮುಖ್ಯರಸ್ತೆಗೆ ತರುತ್ತಿದ್ದಾಗ ಎದುರಿನಿಂದ ಕಾರೊಂದು ಬಂದಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸವಾರ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ತನ್ನ ಬೈಕನ್ನು ಬಲಬದಿಗೆ ಚಲಾಯಿಸಿದ್ದಾರೆ. ದುರದೃಷ್ಟವಶಾತ್, ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನೂ ತಕ್ಷಣವೇ ಸ್ಥಳೀಯರ ನೆರವಿನಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.







