ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟದ ನೆಪದಲ್ಲಿ ವಂಚನೆ: ಮತ್ತೊಂದು ಪ್ರಕರಣ ದಾಖಲು

ಮಂಗಳೂರು: ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟದ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ ಉತ್ತರ ಕನ್ನಡ ಬನವಾಸಿಯ ಸೊರಬಾ ರಸ್ತೆ ನಿವಾಸಿ ರವಿಚಂದ್ರ ರೇವಣಕರ (29) ವಿರುದ್ಧ ಉರ್ವ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಒಎಲ್‌ಎಕ್ಸ್‌ನಲ್ಲಿ ಆ್ಯಪ್‌ನಲ್ಲಿ ಕಾರು ಮಾರಾಟದ ಬಗ್ಗೆ ಶ್ರಾವ್ಯ ಶ್ರೀಪತಿ ಎಂಬವರ ಹೆಸರಿನಲ್ಲಿದ್ದ ಜಾಹೀರಾ ತನ್ನು ನೋಡಿದ ತಾನು ಮೇ 1ರಂದು ಜಾಹೀರಾತಿನ ಚಾಟ್ ಮೇಲೆ ಕ್ಲಿಕ್ ಮಾಡಿದ್ದೆ. ಮೇ 8ರಂದು ರವಿಚಂದ್ರ ಎಂ. ರೇವಣಕರ ಕರೆ ಮಾಡಿ ಕಾರು ತಂದುಕೊಡುವುದಾಗಿ ತಿಳಿಸಿದ್ದ. ಬಳಿಕ ಹಂತ ಹಂತವಾಗಿ 3.30 ಲಕ್ಷ ರೂ. ಹಣ ಪಡೆದುಕೊಂಡಿದ್ದ. ನಂತರ ಪ್ರತಿದಿನ ರವಿಚಂದ್ರ ಮತ್ತಾತನ ತಂದೆ ಎಂದು ಹೇಳಿ ಕೊಳ್ಳುವ ವ್ಯಕ್ತಿ ಕರೆ ಮಾಡಿ ಕಾರನ್ನು ಶೀಘ್ರವೇ ತಲುಪಿಸುತ್ತೇನೆ ಎಂದಿದ್ದ. ಕಾರು ರಿಪೇರಿಯಲ್ಲಿದೆ ಎಂದೂ ಹೇಳಿದ್ದ. ಕೊನೆಗೆ ಹಣ ವಾಪಸ್ ನೀಡುವಂತೆ ಕೇಳಿದಾಗ ಜೂ.6ರಂದು ಪ್ರೀತಿ ಪವರ್ ಎಂಬ ಹೆಸರಿನಲ್ಲಿ ಬ್ಯಾಂಕ್ ಒಂದರ ಗಂಗಾವತಿ ಶಾಖೆಯಿಂದ 3.30 ಲಕ್ಷ ರೂ. ಹಣಕ್ಕೆ ಒಂದು ಚೆಕ್ ಬರೆದು ಅಕೌಂಟ್‌ಗೆ ಹಣ ವರ್ಗಾಯಿಸಿರುವುದಾಗಿ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದ. ಖಾತೆಗೆ ಹಣ ಬಾರದಿದ್ದಾಗ ಮತ್ತೆ ಆತನಿಗೆ ಕರೆ ಮಾಡಿದೆ. ನಾಳೆ ಬರುತ್ತದೆ ಎಂದಿದ್ದ. ಜೂ.13ರಂದು 10 ಸಾವಿರ ರೂ.ವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, ಉಳಿದ 3.20 ಲಕ್ಷ ರೂ.ವನ್ನು ಖಾತೆಗೆ ಜಮೆ ಮಾಡದೆ, ಕಾರನ್ನೂ ನೀಡದೆ ಸತಾಯಿಸಿದ್ದಾನೆ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ ಎಂದು ಹಣ ಕಳಕೊಂಡ ವ್ಯಕ್ತಿ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.





