ಬೆಳಪು ವಿವಿ ಕಟ್ಟಡ ನಿರ್ಮಾಣದಲ್ಲಿ ಭ್ರಷ್ಟಾಚಾರ: ದೇವೀಪ್ರಸಾದ್ ಶೆಟ್ಟಿ ಆರೋಪ
ಪಡುಬಿದ್ರಿ: ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹತ್ವಾಕಾಂಕ್ಷಿ ಯೋಜನೆ ವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಪಿ.ಜಿ. ಸೆಂಟರ್ ಕಾಮಗಾರಿ ಕೋಟ್ಯಾಂತರ ಹಣ ಸರಕಾರದಿಂದ ಮಂಜೂರುಗೊಂಡರೂ, ಮಂಗಳೂರು ವಿಶ್ವವಿದ್ಯಾಲಯದವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೀಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.
ಬೆಳಪುವಿನಲ್ಲಿ ಮಹತ್ವಾಕಾಂಕ್ಷಿ ಯೋಜನೆ 2014ರಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಂದ ಚಾಲನೆಗೊಂಡಿತ್ತು. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, 9 ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಯಾವುದೇ ತರಗತಿ ಪ್ರಾರಂಭಗೊಂಡಿಲ್ಲ. ಕೋಟ್ಯಾಂತರ ಹಣ ಸರಕಾರದಿಂದ ಮಂಜೂರುಗೊಂಡರೂ ಮಂಗಳೂರು ವಿಶ್ವವಿದ್ಯಾಲಯದವರು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲವೊಂದು ಭ್ರಷ್ಟಾಚಾರಗಳು ನಡೆದಿದೆ. ಯಾರು ಯಾರಿಗೆ ಎಷ್ಟೆಷ್ಟು ಪಾಲು ಎಂದು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ಎಲ್ಲಾ ದಾಖಲೆಗಳನ್ನು ಮಾಹಿತಿ ಹಕ್ಕಿನಿಂದ ಪಡೆದುಕೊಂಡಿರುತ್ತೇವೆ. ಬಡ ವಿದ್ಯಾರ್ಥಿಗಳ ಆಶಾ ಕಿರಣವಾಗ ಬೇಕೆಂದು 10 ವರ್ಷಗಳ ನಿರಂತರ ಹೋರಾಟದಿಂದ ಕಾಲೇಜು ಸ್ಥಾಪನೆಯ ಕನಸು ನನಸಾದರೂ ಅದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ. ಸರಕಾರದ ಹಣ ದುರುಪಯೋಗವಾಗಿದೆ. ಉನ್ನತ ಮಟ್ಟದ ತನಿಖೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗಬಹುದೆಂದು ಶೆಟ್ಟಿ ತಿಳಿಸಿದ್ದಾರೆ.





