ಉಪ್ಪಿನಂಗಡಿ: ರಜಾ ದಿನದಲ್ಲಿ ಅಂಗನವಾಡಿಯಲ್ಲಿ ವ್ಯಕ್ತಿಗಳ ತಂಡದಿಂದ ಸಭೆ; ತನಿಖೆಗೆ ಒತ್ತಾಯ

ಸಭೆ ನಡೆಸುತ್ತಿರುವ ಜಿಪಿಎಸ್ ಫೋಟೊ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಅಂಗನವಾಡಿ ಕೇಂದ್ರದಲ್ಲಿ ರವಿವಾರ ಸಂಜೆ ತಂಡವೊಂದು ಅಂಗನವಾಡಿಯ ಒಳಗೆ ನುಗ್ಗಿ ಸಭೆ ನಡೆಸಿದ ಬಗ್ಗೆ ಆರೋಪ ಕೇಳಿ ಬಂದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳ ಹಾಗೂ ಗರ್ಭೀಣಿಯರ ಪೌಷ್ಟಿಕ ಆಹಾರ ಸಾಮಗ್ರಿ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ವಸ್ತು ಗಳು ದಾಸ್ತಾನಿರುವ ಕಟ್ಟಡ ದೊಳಗೆ ರಜಾ ದಿನದಲ್ಲಿ ಖಾಸಗಿ ವ್ಯಕ್ತಿಗಳು ಸಭೆ ನಡೆಸಿರುವುದು ಗಂಭೀರ ಪ್ರಕರಣವಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಮೈಂದಡ್ಕದ ಸರ್ವೇ ನಂ. 88/1ರಲ್ಲಿರುವ 0.5 ಸೆಂಟ್ಸ್ ಜಾಗದಲ್ಲಿ ಅನಧಿಕೃತ ಕಟ್ಟಡವೊಂದಿದ್ದು, ಅಲ್ಲಿ ಈಗ ಅಂಗನವಾಡಿ ಕಾರ್ಯಾಚರಿಸುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ರವಿವಾರ ದಿನ ಅಂಗನವಾಡಿ ಕಟ್ಟಡದೊಳಗೆ ನುಗ್ಗಿದ ಕೆಲವರು ಅಲ್ಲಿದ್ದ ಮೇಜು, ಕಪಾಟು, ಗೋಡೆಗೆ ಸಂಘಟನೆಯೊಂದರ ಸ್ಟಿಕ್ಕರ್ ಅಳವಡಿಸಿ, ಈ ಕಟ್ಟಡ ನಮ್ಮದು ಎಂದು ಸಾಬೀತುಪಡಿಸಲು ಹೊರಟಿದ್ದರು. ಈ ಸಂದರ್ಭದಲ್ಲಿ ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಅಲ್ಲದೇ, 34 ನೆಕ್ಕಿಲಾಡಿ ಗ್ರಾ.ಪಂ.ನ ಅಂದಿನ ಪಿಡಿಒ ಅವರು ಅನಧಿಕೃತ ಕಟ್ಟಡವಾದರೂ ಇದಕ್ಕೆ ಸಂಘಟನೆಯೊಂದರ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂ ಇಲಾಖೆಗೆ ಎನ್ಒಸಿ ನೀಡಿದ್ದರು. ಇದು ಕೂಡಾ ವಿವಾದಕ್ಕೆ ಕಾರಣವಾದಾಗ ಅದೇ ಪಿಡಿಒ ಅವರು ಈ ಕಟ್ಟಡಕ್ಕೆ ನಿಗದಿತ ದಾಖಲೆಗಳು ಇಲ್ಲದಿರುವುದರಿಂದ ವಿದ್ಯುತ್ ಸಂಪರ್ಕಕ್ಕೆ ನೀಡಿದ ಎನ್ಒಸಿ ಯನ್ನು ರದ್ದುಪಡಿಸಲು ಕೋರಿ ಮೆಸ್ಕಾಂಗೆ ಪತ್ರ ಬರೆದಿದ್ದರು. ಹೀಗೆ ವಿವಾದ ಕೇಂದ್ರವಾಗಿದ್ದ ಈ ಅಂಗನ ವಾಡಿ ಕಟ್ಟಡವು ಈ ಮತ್ತೊಮ್ಮೆ ಸುದ್ದಿಯಾಗಿದ್ದು, ಜೂ.29ರಂದು ಸಂಜೆ ಕೆಲವು ವ್ಯಕ್ತಿಗಳು ಅಂಗನವಾಡಿ ಕೇಂದ್ರದಲ್ಲಿ ಸಭೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿ ಜಿಪಿಎಸ್ ಪೋಟೋ ಕೂಡಾ ಪತ್ರಿಕೆಗೆ ಲಭ್ಯವಾಗಿದೆ.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಸೇರಿದ ಅಂಗನವಾಡಿ ಕೇಂದ್ರದೊಳಗೆ ಅಂಗನವಾಡಿ ಕಾರ್ಯಕರ್ತೆ ಇರದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸಭೆ ನಡೆಸಲು ಅನುಮತಿ ನೀಡಿದ್ದು ಯಾರು? ಅವರಿಗೆ ಅಂಗನವಾಡಿಯ ಬೀಗದ ಕೀ ಹೇಗೆ ಸಿಕ್ಕಿತ್ತು. ಅದು ಕೂಡಾ ಅಂಗನವಾಡಿ ಕಾರ್ಯಕರ್ತೆ ಕುಳಿತುಕೊಳ್ಳುವ ಕುರ್ಚಿಯಲ್ಲಿ ಕುಳಿತು ಸಭೆ ನಡೆಸಲು ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡಿದ್ದು ಯಾರು? ಇಲಾಖೆಗೆ ಸಂಬಂಧ ಪಟ್ಟವರಲ್ಲಿ ಅಲ್ಲದೇ, ಇತರ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಅಂಗನವಾಡಿಯ ಬೀಗದ ಕೀ ಕೊಡಬಹುದೇ? ನಾಳೆ ಏನಾದರೂ ಸಮಸ್ಯೆಯುಂಟಾದರೆ ಯಾರು ಹೊಣೆ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರದ್ದಾಗಿದ್ದು, ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಸೂಕ್ತ ತನಿಖೆ ನಡೆಸಿ, ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
"ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ, ಗಭೀಣಿಯರಿಗೆ ಬೇಕಾದ ಪೌಷ್ಟಿಕ ಆಹಾರ ದಾಸ್ತಾನಿಡಲಾ ಗಿರುತ್ತದೆ. ಇದಲ್ಲದೆ, ಮಕ್ಕಳಿಗೆ ಸಂಬಂಧಿಸಿದ ದಾಖಲೆಗಳು ಇರುತ್ತದೆ. ಇಂತಹ ಸೂಕ್ಷತೆ ಇರುವ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸಭೆ ನಡೆಸಲು ಅನುವು ಮಾಡಿಕೊಟ್ಟಿರುವಂತದ್ದು ಗಂಭೀರವಾದ ಪ್ರಕರಣವಾಗಿದೆ. ರಜಾ ದಿನಗಳಲ್ಲಿ, ಅಂಗನವಾಡಿ ಕಾರ್ಯಕರ್ತೆ ಇರದ ಸಂದರ್ಭದಲ್ಲಿ ಹೀಗೆ ಸಾರ್ವಜನಿ ಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದರೆ ನಾಳೆ ಮಕ್ಕಳ ಪೌಷ್ಟಿಕ ಆಹಾರದಲ್ಲಿ ಏನಾದರೂ ವ್ಯತ್ಯಾಸಗಳಾದರೆ ಆಗ ಇದಕ್ಕೆ ಯಾರು ಹೊಣೆಗಾರರು ? ಈ ಹಿಂದೆಯೂ ಕೆಲವರು ರವಿವಾರ ಅಂಗವನಾಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಕಟ್ಟಡದೊಳಗೆ ಸಂಘಟನೆಯ ಸ್ಟಿಕ್ಕರ್ ಅಂಟಿಸಿದ ಘಟನೆಯೂ ನಡೆದಿತ್ತು. ಈಗ ಮತ್ತೊಮ್ಮೆ ಇಂತದ್ದೇ ಘಟನೆ ಪುನಾರವರ್ತನೆಯಾದಂತಾಗಿದೆ. ಅದು ಕೂಡಾ ಮೈಂದಡ್ಕ ಪರಿಸರದಲ್ಲಿ ಈಗಾಗಲೇ ಒಂದು ಪೋಕ್ಸೋ ಹಾಗೂ ಒಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಅಂಗನವಾಡಿ ಇರುವುದು ನಿರ್ಜನ ಪ್ರದೇಶದಲ್ಲಿ. ಹೀಗೆ ಸಿಕ್ಕವರಲ್ಲಿ ಎಲ್ಲಾ ಅಂಗನವಾಡಿಯ ಬೀಗದ ಕೀ ಕೊಟ್ಟರೆ ಇಲ್ಲಿ ಅನೈತಿಕ ಚಟುವಟಿಕೆ ನಡೆಯುವ ಸಾಧ್ಯತೆಗಳು ಇದೆ. ಈ ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಲಾಗುವುದು.
- ಕಲಂದರ್ ಶಾಫಿ, ಸಾಮಾಜಿಕ ಹೋರಾಟಗಾರರು.
ಈ ಬಗ್ಗೆ ಮಾಧ್ಯಮವು ಇಲಾಖೆಯ ಸಿಡಿಪಿಒ ಅವರನ್ನು ಪ್ರಶ್ನಿಸಿದಾಗ ಉತ್ತರಿಸಿದ ಸಿಡಿಪಿಒ ಹರೀಶ್ ಅವರು, ಈ ಬಗ್ಗೆ ನಿಮ್ಮ ಮೂಲಕವಷ್ಟೇ ನನ್ನ ಗಮನಕ್ಕೆ ಬಂದಿದೆ. ನಾನು ಅಂಗನವಾಡಿ ಕಾರ್ಯಕರ್ತೆಯವರನ್ನು ವಿಚಾರಿಸಿದಾಗ ಅಂಗನವಾಡಿಯ ಹಿಂದೆ ಧರೆ ಬಿದ್ದಿತ್ತು. ಈ ಬಗ್ಗೆ ಚರ್ಚಿಸಲು ಬಾಲವಿಕಾಸ ಸಮಿತಿಯ ಅಧ್ಯಕ್ಷರೂ ಸೇರಿದಂತೆ ಇತರರು ಸಭೆ ನಡೆಸಿದ್ದರು ಎಂದು ತಿಳಿಸಿದ್ದಾರೆ. ಆದರೆ ಧರೆ ಕುಸಿದ ಬಗ್ಗೆ ಗ್ರಾಮಕರಣಿಕರಿಗೆ ಮಾಹಿತಿ ನೀಡಲಾಗಿದೆಯೇ? ರಜಾ ದಿನದಲ್ಲಿ, ಅಂಗನವಾಡಿ ಕಾರ್ಯಕರ್ತೆ ಇರದ ಸಮಯದಲ್ಲಿ ಈ ರೀತಿ ಖಾಸಗಿ ವ್ಯಕ್ತಿಗಳಿಗೆ ಸಭೆ ನಡೆಸಲು ಅವಕಾಶವಿದೆಯಾ ಎಂದು ಸಿಡಿಪಿಒ ಅವರನ್ನು ಮರು ಪ್ರಶ್ನಿಸಿದಾಗ, ನಾನು ಹೊಸದಾಗಿ ಬಂದಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ವಿಚಾರಿಸ್ತೇನೆ. ಇನ್ನು ಮುಂದೆ ನನ್ನ ವ್ಯಾಪ್ತಿಯ ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.







