ಬಂಗ್ರಕೂಳೂರಿನ ಯಾರ್ಡ್‌ನ ಸೆಕ್ಯೂರಿಟಿ ಸಿಬ್ಬಂದಿಗೆ ಹಲ್ಲೆ: ಪ್ರಕರಣ ದಾಖಲು

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳನ್ನು ನಿಲ್ಲಿಸುವ ಬಂಗ್ರಕೂಳೂರಿನ ಯಾರ್ಡ್‌ನ ಸೆಕ್ಯೂರಿಟಿ ಸಿಬ್ಬಂದಿಗೆ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ 11,500 ರೂ. ಮೌಲ್ಯದ ಮೊಬೈಲ್ ಹಾಗೂ 1,500 ರೂ.ವನ್ನು ದೋಚಿ ಪರಾರಿಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.1ರಂದು ರಾತ್ರಿ ಇಬ್ಬರು ಸೆಕ್ಯುರಿಟಿ ಸಿಬ್ಬಂದಿಗಳು ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಯಾರ್ಡ್‌ನಿಂದ ಸ್ವಲ್ಪ ದೂರದಲ್ಲಿ ಇಬ್ಬರು ಯುವಕರು ಮಂಗಳಮುಖಿಯರೊಂದಿಗೆ ಜಗಳ ಮಾಡುತ್ತಿದ್ದುದನ್ನು ಕಂಡ ಸೆಕ್ಯುರಿಟಿ ಬರ್ಬುಯ್ಯ ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರವನ್ನು ತನ್ನ ಮೇಲ್ವಿಚಾರಕ ಸನಿದುಲ್‌ರಿಗೆ ಬರ್ಬುಯ್ಯ ಕರೆ ಮಾಡಿ ತಿಳಿಸಿದ್ದು, ರಾತ್ರಿ 9:30ರ ವೇಳೆಗೆ ಆ ಯುವಕರು ಬರ್ಬುಯ್ಯರ ಬಳಿ ಬಂದು ಅವಾಚ್ಯವಾಗಿ ಬೈದು ಮುಖ, ಕುತ್ತಿಗೆ ಮತ್ತು ಎದೆಗೆ ಹೊಡೆದು, ಕಾಲಿನಿಂದ ತುಳಿದು ಹಣ ಮತ್ತು ಮೊಬೈಲ್ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ದ್ದಾರೆ. ಅಲ್ಲದೆ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





