ಕೊಣಾಜೆ: ಅಪಾಯಕಾರಿ ದಡಸು ಕೆರೆಯಲ್ಲಿ ಮೋಜಿನ ಈಜಾಟ; ಗ್ರಾ.ಪಂ.ನಿಂದ ದಂಡದ ಎಚ್ಚರಿಕೆ
ಈಜಾಡಕ್ಕೆ ಕಡಿವಾಣ ಹಾಕಲು ಸ್ಥಳೀಯರ ಆಗ್ರಹ

ಕೊಣಾಜೆ: ಕೊಣಾಜೆ ಗ್ರಾಮದ ಅಸೈಗೋಳಿ ಸಮೀಪದ ದಡಸು ಬಳಿ ಮೂಡಾ ಕೆರೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾದ ಬೃಹತ್ ಕೆರೆಯಲ್ಲಿ ಇದೀಗ ಯುವಕರ, ವಿದ್ಯಾರ್ಥಿಗಳ ತಂಡವು ಈಜಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಅಪಾಯದ ಕೆರೆಯಲ್ಲಿ ಯುವಕರ ಮೋಜಿನ ಈಜಾಟಕ್ಕೆ ಕೊಣಾಜೆ ಗ್ರಾಮ ಪಂಚಾಯತಿ ದಂಡ ವಿಧಿಸುವ ಮೂಲಕ ಬ್ರೇಕ್ ಹಾಕುವ ಪ್ರಯತ್ನ ಮಾಡಿದರೂ ಕಣ್ಣು ತಪ್ಪಿಸಿ ಈಜಾಟ ಮುಂದುವರಿದಿದೆ.
ಅಸೈಗೋಳಿ ಸಮೀಪದ ದಡಸು ಪ್ರದೇಶದಲ್ಲಿ ಬಹಳ ವರ್ಷಗಳ ಹಿಂದೆಯೇ ಈ ಕೆರೆ ಇದ್ದು, ಬೇಸಿಗೆ ಕಾಲದಲ್ಲಿ ಊರಿನ ಸುತ್ತ ನೀರಿನ ಬರ ಎದುರಾದರೂ ಈ ಕೆರೆಯಲ್ಲಿ ಸಾಕಷ್ಟು ನೀರಿತ್ತು. ಕೆರೆಯನ್ನು ಅಭಿವೃದ್ಧಿಗೊಳಿಸಿದರೆ ಇಡೀ ಊರಿನ ಜಲಕ್ಷಾಮವನ್ನು ನಿವಾರಿಸಬಹುದು ಎಂಬ ದೃಷ್ಟಿಯಿಂದ ಕೆರೆಯ ಹೂಳೆತ್ತಿ ಅಗಲೀಕರಗೊಳಿಸಿ ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸಲಾಯಿತು. ಬಳಿಕ ಈ ದಡಸು ಕೆರೆಯಲ್ಲಿ ಜಲಧಾರೆ ಕೂಡಾ ಹೆಚ್ಚಾಗಿದೆ ಜೊತೆಗೆ ಪರಿಸರದ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ.
ಯುವಕರಿಂದ, ವಿದ್ಯಾರ್ಥಿಗಳಿಂದ ಜಲಕ್ರೀಡೆ
ಕೊಣಾಜೆ ಗ್ರಾಮದ ಸುತ್ತ ಮುತ್ತ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಇಂಜಿನಿಯರಿಂಗ್ , ಮೆಡಿಕಲ್ ಕಾಲೇಜುಗಳು ಸೇರಿದಂತೆ ಇತರ ಶೈಕ್ಷಣಿಕ ಸಂಸ್ಥೆಗಳಿವೆ. ರಜಾ ಸಂದರ್ಭದಲ್ಲಿ ಹಾಗೂ ಇತರ ಸಮಯ ದಲ್ಲೂ ಕೆಲವು ವಿದ್ಯಾರ್ಥಿಗಳ ತಂಡವು ಬಂದು ಈಜಾಟದಲ್ಲಿ ತೊಡಗಿಸಿಕೊಂಡಿವೆ. ಅಲ್ಲದೆ ಕೆಲವು ಯುವಕರು ಇಲ್ಲಿಯ ಕೆರೆ ಹಾಗೂ ಈಜಾಟದ ದೃಶ್ಯವನ್ನು ಇನ್ಸ್ಟಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪರಿಣಾಮ ದೂರದ ಊರುಗಳಿಂದಲೂ ಯುವಕರು, ಮಕ್ಕಳೂ ಕೂಡಾ ಬಂದು ಈಜಾಡುತ್ತಿದ್ದಾರೆ.
ಅಪಾಯಕಾರಿ; ಕೆರೆ ಅಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿ ಪಡಿಸಲಾದ ಈ ಕೆರೆ ಆಳವಾಗಿದೆ ಜೊತೆಗೆ ಸುಮಾರು ಎಪ್ಪತ್ತು ಸೆಂಟ್ಸ್ ನಷ್ಟು ವಿಸ್ತಾರವಾಗಿದ್ದು, ಈಜುಕೊಳದ ರೀತಿಯಲ್ಲೇ ಗೋಚರಿಸುತ್ತಿದೆ. ಅಲ್ಲದೆ ಇದೀಗ ಮಳೆಗಾಲವೂ ಆಗಿರುವುದರಿಂದ ಕೆರೆಯು ತುಂಬಿ ಹರಿಯುತ್ತಿದೆ. ಆದ್ದರಿಂದ ವಿದ್ಯಾರ್ಥಿ ಗಳು ಯುವಕರು ಈ ಕೆರೆಗೆ ಆಕರ್ಷಿತರಾಗಿ ಯಾವುದೇ ರಕ್ಷಣಾತ್ಮಕ ವ್ಯವಸ್ಥೆ ಇಲ್ಲದಿದ್ದರೂ ಅಪಾಯ ವನ್ನೂ ಲೆಕ್ಕಿಸದೆ ಈಜುತ್ತಿರುವುದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.
ಈ ಅಸೈಗೋಳಿ ಸಮೀಪದ ದಡಸು, ಗಣೇಶ್ ಮಹಲ್ ಪ್ರದೇಶವು ಅಭಿವೃದ್ಧಿ ಪ್ರದೇಶವಾಗಿ ರೂಪುಗೊ ಳ್ಳುತ್ತಿದ್ದು,ಕಳೆದ ಕೆಲವು ವರ್ಷಗಳ ಹಿಂದೆ ಇಲ್ಲೇ ಸಮೀಪದ ಸರ್ಕಾರಿ ಜಮೀನಿನಲ್ಲಿ ಅಬ್ದುಲ್ ಕಲಾಂ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ನಿರ್ಮಾಣಗೊಂಡಿದ್ದು, ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿಯೂ ಇದೇ ಕೆರೆಯ ನೀರನ್ನು ಬಳಕೆ ಮಾಡಲಾಗಿತ್ತು. ಅಲ್ಲದೇ ಹಲವು ವರ್ಷಗಳ ಹಿಂದೆಯೇ ಮೂಡಾದ ಸೈಟ್ ನಿರ್ಮಾಣಕ್ಕೆ ಇದೇ ಪರಿಸರದ ಜಾಗವನ್ನು ಗುರುತಿಸಿ ಇದೀಗ ಕಾಮಗಾರಿ ಆರಂಭಗೊಂಡಿದ್ದು ಇಲ್ಲಿಗೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಕಾರ್ಯ ಪೂರ್ಣಗೊಂಡಿದೆ.
ತಡೆಬೇಲಿ ಅಗತ್ಯ: ದಿನದಿಂದ ದಿನಕ್ಕೆ ಇಲ್ಲಿ ಈಜಾಟ ಮಾಡಲು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕೊಣಾಜೆ ಗ್ರಾಮ ಪಂಚಾಯತ್ ಅಪಾಯಕಾರಿ ಕೆರೆಯಲ್ಲಿ ಈಜಾಡುವುದನ್ಬು ತಪ್ಪಿಸಲು ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಅಲ್ಲಲ್ಲಿ ಬ್ಯಾನರ್ ಕೂಡಾ ಅಳವಡಿಸಿದೆ. ಇದರ ನಡುವೆಯೂ ಈಜಾಟ ಮುಂದುವರಿದಿದೆ. ಕೆರೆ ಬಳಿ ಹಾಕಲಾಗಿದ್ದ ಬ್ಯಾನರನ್ನೂ ಕಿತ್ತೆಸೆಯಲಾಗಿದೆ. ಕೆರೆಯ ಸುತ್ತ ತಡೆಬೇಲಿ ನಿರ್ಮಿಸಿ ಈಜಾಟಕ್ಕೆ ಬ್ರೇಕ್ ಹಾಕಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪ್ರವಾಸೋದ್ಯಮಕ್ಕೆ ಅವಕಾಶ
ಪ್ದಾಕೃತಿಕವಾಗಿ ಸುಂದರವಾಗಿರುವ ಈ ಪ್ರದೇಶದಲ್ಲಿ ಸುಮಾರು ಒಂದುವರೇ ಎಕರೆಯಷ್ಟು ಜಾಗವನ್ನು ಈ ಕೆರೆಗಾಗಿ ಮೀಸಲಿಡಲಾಗಿದ್ದು, ಇದರಲ್ಲಿ ಸುಮಾರು ಎಪ್ಪತ್ತು ಸೆಂಟ್ಸ್ ನಷ್ಟು ಜಮೀನಿನಲ್ಲಿ ಈ ಕೆರೆ ನಿರ್ಮಾಣಗೊಂಡಿದೆ. ಉಳಿದ ಜಾಗದಲ್ಲಿ ಸಸ್ಯೋದ್ಯಾನ, ಪಾರ್ಕ್ ನಿರ್ಮಾಣದಂತಹ ಯೋಜನೆಯನ್ನು ರೂಪಿಸಿದರೆ ಮುಂದೆ ಈ ಪ್ರದೇಶವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ರೂಪಿಸಬಹುದು.
"ಕೊಣಾಜೆ ಗ್ರಾಮ ಪಂಚಾಯತ್ ನಲ್ಲಿ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಈ ಕೆರೆ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಬೇಡಿಕೆ ಇಟ್ಟಾಗ ಯು.ಟಿ.ಖಾದರ್ ಅವರ ಸಹಕಾರದೊಂದಿಗೆ ಇದಕ್ಕೆ ಅನುದಾನ ಮಂಜೂರುಗೊಂಡು 2017-18 ರಲ್ಲಿ ಮೂಡಾದ ಕೆರೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಸಜ್ಜಿತ ಕೆರೆಯು ನಿರ್ಮಾಣಗೊಂಡಿದೆ. ಕುಡಿಯುವ ನೀರಿನ ಬಳಕೆ ಸೇರಿದಂತೆ ಈ ಭಾಗದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿದ್ದು ಗ್ರಾಮಕ್ಕೂ ಅನುಕೂಲವಾಗಿದೆ. ಆದರೆ ಇದೀಗ ಎಲ್ಲೆಲ್ಲಿಂದ ಬಂದು ಯುವಕರು ವಿದ್ಯಾರ್ಥಿಗಳು ಇಲ್ಲಿ ಈಜಾಟದಲ್ಲಿ ತೊಡಗಿಸಿಕೊಂಡಿರುವುದು ಅಪಾಯಕಾರಿಯಾಗಿದೆ".
ಶೌಕತ್ ಆಲಿ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು
"ಇತ್ತೀಚೆಗೆ ಈ ಕೆರೆಯ ಬಳಿ ವಿದ್ಯಾರ್ಥಿಗಳು, ಯುವಕರು ಸೇರುವುದರೊಂದಿಗೆ ಈಜಾಟದಲ್ಲಿ ತೊಡಗಿಸು ತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಕೂಡಲೇ ಅಲ್ಲಲ್ಲಿ ಬ್ಯಾನರ್ ಅಳವಡಿಸಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ ಮತ್ತು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ".
ಗೀತಾ ಕುಂದರ್, ಅಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್
"ಪ್ರಾಕೃತಿಕ ವಿಕೋಪದಿಂದಾಗಿ ಅಲ್ಲಲ್ಲಿ ಸಾವು ನೋವಿನ ಅನಹುತಗಳು ನಡೆಯುತ್ತಿರುವ ಈ ಸಮಯ ದಲ್ಲಿ ಈ ಕೆರೆಯ ಬಳಿ ಮತ್ತಷ್ಟು ಅನಾಹುತಗಳು ಸಂಭವಿಸದಂತೆ ಸ್ಥಳಿಯಾಡಳಿತ ಎಚ್ಚೆತ್ತುಕೊಳ್ಳಬೇಕು. ಕೆರೆಗಳು ಸೇರಿದಂತೆ ಕಲ್ಲಿನ ಕೋರೆಗಳಲ್ಲಿ ವಿದ್ಯಾರ್ಥಿಗಳು ಯುವಕರು ಅಪಾಯ ಮರೆತು ಈಜಾಡುವುದಕ್ಕೆ ಕಡಿವಾಣ ಹಾಕಬೇಕು".
-ಅಬ್ದುಲ್ ರಹಿಮಾನ್ ಕೋಡಿಜಾಲ್ ಎ.ಕೆ., ಸ್ಥಳೀಯರು ಹಾಗೂ ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷರು







