ಮಂಗಳೂರು: ಆಶಾಕಿರಣ ದೃಷ್ಟಿ ಕೇಂದ್ರದಲ್ಲಿ ಉಚಿತ ಕನ್ನಡಕ ವಿತರಣೆ

ಮಂಗಳೂರು: ಕಣ್ಣಿನ ಆರೋಗ್ಯವು ಪ್ರತಿಯೊಬ್ಬರಿಗೂ ಪ್ರಾಮುಖ್ಯವಾಗಿದೆ. ನಿಯುತವಾಗಿ ಕಣ್ಣುಗಳನ್ನು ಪರೀಕ್ಷಿಸಿ ರಕ್ಷಿಸಿಕೊಳ್ಳಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ವೆನ್ಲಾಕ ಆಸ್ಪತ್ರೆಯ ಆಶಾಕಿರಣ ದೃಷ್ಟಿ ಕೇಂದ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉಚಿತ ಕನ್ನಡಕ ವಿತರಿಸಿ ಅವರು ಮಾತನಾಡಿದರು.
ದೃಷ್ಟಿಯು ಪ್ರತಿಯೊಬ್ಬ ಮಾನವನ ಉನ್ನತ ಸೃಷ್ಟಿಯಾಗಿದೆ. ಕಣ್ಣಿನ ಆರೋಗ್ಯದಲ್ಲಿ ನಿರ್ಲಕ್ಷ್ಯವಹಿಸುವುದು ಸಲ್ಲದು ಎಂದು ಮಮತಾ ಗಟ್ಟಿ ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲಾ ನಗರ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಶಾಲೆಗಳಲ್ಲಿ ಆಶಾ ಕಾರ್ಯಕರ್ತೆ ಯರು ಸಮೀಕ್ಷೆ ನಡೆಸಿ ದೃಷ್ಟಿದೋಷ ಉಳ್ಳವರ ಪತ್ತೆ ಹಚ್ಚಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ನೇತ್ರ ಸಮಸ್ಯೆ ಉಳ್ಳವರಿಗೆ ಆರೋಗ್ಯ ಕೇಂದ್ರಗಳಲ್ಲಿ ನೇತ್ರ ತಜ್ಞರು ತಪಾಸಣೆ ಮಾಡಿದ್ದು, ಜಿಲ್ಲೆಯಲ್ಲಿ ಈವರೆಗೆ 1,832 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ಜಿಲ್ಲೆಯ 13 ಕೇಂದ್ರಗಳಲ್ಲಿ ನೇತ್ರ ತಪಾಸಣೆ ಮಾಡಲಾಗಿದೆ. ಎಪಿಎಲ್, ಬಿಪಿಎಲ್ ಎಂಬ ಭೇದವಿಲ್ಲದೆ ಎಲ್ಲರಿಗೂ ತಪಾಸಣೆ ಮಾಡಿ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ ಎಂದು ಡಾ. ತಿಮ್ಮಯ್ಯ ಹೇಳಿದರು.
ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್, ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ ಡಾ.ಸುದರ್ಶನ್, ವೆನ್ಲಾಕ್ ನೇತ್ರ ತಜ್ಞೆ ಡಾ. ಅನಿತಾ ಮತ್ತಿತರರು ಉಪಸ್ಥಿತರಿದ್ದರು.







