ರಸ್ತೆ ಅಪಘಾತ: ಗಾಯಾಳು ಯುವ ವೈದ್ಯ ಮೃತ್ಯು

ಸುಳ್ಯ: ಎರಡು ವಾರಗಳ ಹಿಂದೆ ಸೋಣಂಗೇರಿ ಸಮೀಪ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಲ್ಲುಗುಂಡಿಯ ಯುವ ವೈದ್ಯ ಡಾ. ಶಮಂತ್ (25) ರವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಲ್ಲುಗುಂಡಿಯ ವೈದ್ಯ ಡಾ. ಶ್ಯಾಮ್ ಭಟ್ ಅವರ ಪುತ್ರ ಡಾ. ಶಮಂತ್ ಅವರು ದುಗ್ಗಲಡ್ಕದ ಕ್ಲಿನಿಕ್‍ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರತಿದಿನ ಕಲ್ಲುಗುಂಡಿಯಿಂದ ದುಗ್ಗಲಡ್ಕಕ್ಕೆ ಬೈಕಿನಲ್ಲಿ ಬರುತ್ತಿದ್ದ ಅವರು ಸೋಣಂಗೆರಿ ಸಮೀಪ ಅಪಘಾತವಾಗಿತ್ತು. ಸುಳ್ಯದಿಂದ ಪೈಲಾರಿಗೆ ಹೋಗುತ್ತಿದ್ದ ಸರಕಾರಿ ಬಸ್ಸು ಮತ್ತು ಬೈಕ್ ನಡುವೆ ಅಪಘಾತದಲ್ಲಿ ಯುವ ವೈದ್ಯನ ಕಾಲಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಾಲು ತೀವ್ರವಾಗಿ ಜಖಂಗೊಂಡಿದ್ದ ಹಿನ್ನೆಲೆಯಲ್ಲಿ ಮೂರು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹಲವು ದಿನಗಳ ಚಿಕಿತ್ಸೆಯ ಬಳಿಕ ಗುರುವಾರ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.





