ಕಟಪಾಡಿ: ಬಿಜೆಪಿ ವಿರುದ್ಧ ವಿವಿಧ ಗ್ರಾಪಂ ಎದುರು ಪ್ರತಿಭಟನೆ

ಕಟಪಾಡಿ: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯ ಸುಳ್ಳಾರೋಪ ಮತ್ತು ಕೇಂದ್ರ ಸರಕಾರದ ವೈಫಲ್ಯಗಳ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್ ಕಛೇರಿಗಳ ಎದುರುಗಡೆ ಶನಿವಾರ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೃತೃತ್ವದಲ್ಲಿ ಪ್ರತಿಭಟನೆ ಸಭೆ ನಡೆಯಿತು.
ಹಕ್ಕು ಪತ್ರ, ಮನೆ ನಿವೇಶನ ನೀಡಲು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿ ವರ್ಗಗಳ ತಾರತಮ್ಯ ನೀತಿಯನ್ನು ವಿರೋಧಿಸಿ, ಹಾಗೂ 9/11 ಪ್ರಕ್ರಿಯೆಯನ್ನು ಜಟಿಲಗೊಳಿಸಿರುವುದು ಮತ್ತು ವೃದ್ಧಾಪ್ಯ ವೇತನವನ್ನು ರಾಜ್ಯ ಸರ್ಕಾರ ರದ್ದು ಪಡಿಸುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ ಜನರನ್ನು ಗೊಂದಲಕ್ಕೆ ಬಿಜೆಪಿ ಸಿಲುಕಿಸಿ ಅಪಪ್ರಚಾರದ ಮಾಡುತ್ತಿದೆ ಎಂದು ಆರೋಪಿಸಿ ಕಟಪಾಡಿ, ಕೋಟೆ, ಕುರ್ಕಾಲು, ಇನ್ನಂಜೆ ಗ್ರಾಪಂ ಎದುರು ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೊರಕೆ, ಸುಳ್ಳು ಸುದ್ದಿಗಳು ಮತ್ತು ಅಪಪ್ರಚಾರವನ್ನೇ ತಮ್ಮ ಕಾಯಕ ವನ್ನಾಗಿ ಮಾಡಿಕೊಂಡಿರುವ ಬಿಜೆಪಿ ಸುಳ್ಳುಗಳಿಗೆ ಪ್ರತ್ಯುತ್ತರ ನೀಡಲು ಹಾಗೂ ಸತ್ಯ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಎದುರು ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಂಡಿದ್ದೇವೆ.
9/11 ಪ್ರಕ್ರಿಯೆಯ ಗೊಂದಲ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಪಿಂಚಣಿ ಯೋಜನೆಗಳ ಬಗ್ಗೆ ಜನರಿಗೆ ಸುಳ್ಳು ಮಾಹಿತಿಯನ್ನು ಹರಡಿಸಿ, ಅವರ ಬಿಜೆಪಿ ಸರ್ಕಾರದ ಆಡಳಿತದಲ್ಲಿರುವ ಸಂದರ್ಭದಲ್ಲಿ ಆದಂತಹ ಆದೇಶಗಳು ಹಾಗೂ ಈಗಿನ ಕೇಂದ್ರ ಸರ್ಕಾರದ ಆದೇಶಗಳನ್ನೆಲ್ಲ ತಿರುಚಿ ಕಾಂಗ್ರೆಸ್ ಸರ್ಕಾರದ ಆದೇಶವೆಂದು ಅಪಪ್ರಚಾರ ಮಾಡುತ್ತಾ, ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ ಮತ್ತು ಆಧಾರ ರಹಿತ ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೈ. ಸುಕುಮಾರ್ ರವರು ಮಾತನಾಡಿ, ಬಿಜೆಪಿಯವರ ಅಪಪ್ರಚಾರ ವನ್ನು ಸಾರ್ವಜನಿಕರು ನಂಬಬಾರದು, ಸುಳ್ಳು ಒಂದೇ ಅವರ ರಾಜಕೀಯದ ಪ್ರಮುಖ ಬಂಡವಾಳ, ಸುಳ್ಳೇ ಅವರ ಮನೆದೇವರು ಅವರ ಎಲ್ಲ ಸುಳ್ಳು ಆರೋಪಗಳಿಗೆ ಪ್ರತ್ಯುತ್ತರ ನೀಡಿ, ಬಿಜೆಪಿ ಯ ಹುಳುಕುಗಳನ್ನು ಎಳೆ ಎಳೆಯಾಗಿ ಬಿಡಿಸಿ ಜನರಿಗೆ ಮನವರಿಕೆ ಮಾಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ಸರ್ಕಾರದಿಂದ ದೊರಕುವ ಸೌಲಭ್ಯ ವಂಚಿತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪ್ರಮೀಳಾ ಜತ್ತನ್ನ, ದಯಾನಂದ್ ಬಂಗೇರ, ಕಿಶೋರ್ ಅಂಬಾಡಿ, ಸರಸು ಡಿ. ಬಂಗೇರ, ಪ್ರಭಾ ಬಿ. ಶೆಟ್ಟಿ, ಸುಗುಣ, ಪ್ರಶಾಂತ್ ಜತ್ತನ್ನ, ಸುನಿಲ್ ಡಿ. ಬಂಗೇರ, ಸುಶೀಲ್ ಬೋಳಾರ್, ಅಮೀರ್ ಕಾಪು, ನಿಯಾಜ್ ಪಡುಬಿದ್ರೆ, ಗೌರೀಶ್ ಕೋಟ್ಯಾನ್, ನಯೀಮ್ ಕಟಪಾಡಿ, ವಿದ್ಯಾ, ಶಾಲಿನಿ, ಸುಲೋಚನಾ, ಸುಮನ್ ಬೋಳಾರ್, ಪ್ರವೀಣ್ ಫುರ್ತಾಡೊ, ರೋಷನ್, ಅಶೋಕ್ ನಾಯರಿ, ಹಮೀದ್, ಯೂಸುಫ್, ಪ್ರಭಾಕರ್ ಆಚಾರ್ಯ, ಲಿತೇಶ್ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.