ಮಂಗಳೂರು: ಸಿಂಧೂರ ವಿಜಯ ಪಾರ್ಕ್ ಉದ್ಘಾಟನೆ

ಮಂಗಳೂರು: ನಗರದ ಕೊಟ್ಟಾರ ಚೌಕಿ ರಾ.ಹೆ.66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್‌ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆಯು ಶನಿವಾರ ನಡೆಯಿತು.
ಶಾಸಕ ಭರತ್ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು 42.35 ಲಕ್ಷ ರೂ.ವೆಚ್ಚದಲ್ಲಿ ಸೈನಿಕರನ್ನು ಸ್ಮರಿಸುವ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಶಾಸಕರ ಸಹಿತ ಮುಡಾ ಸದಸ್ಯರು, ಅಧಿಕಾರಿಗಳು ಮತ್ತು ಪಾಲಿಕೆಯ ಮಾಜಿ ಸದಸ್ಯರು, ಅಧಿಕಾರಿಗಳ ಸಮನ್ವಯದೊಂದಿಗೆ ಉತ್ತಮವಾಗಿ ನಿರ್ಮಾಣಗೊಂಡಿದೆ ಎಂದು ಶ್ಲಾಘಿಸಿದರು.
ಶಾಸಕ ಭರತ್ ಶೆಟ್ಟಿ ಮಾತನಾಡಿ ಭಾರತವು ಪಾಕಿಸ್ತಾನದ ಉಗ್ರರ ಮೇಲಿನ ಕಾರ್ಯಾಚರಣೆಯಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಸೈನಿಕರ ಶೌರ್ಯದ ಸಿಂಧೂರ ಕಾರ್ಯಾಚರಣೆ ಸದಾ ನೆನಪಿನಲ್ಲಿ ಉಳಿಯುವಂತಾಗಲು ಈ ಉದ್ಯಾನವನಕ್ಕೆ ಸಿಂಧೂರ ವಿಜಯ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು.
ಈ ಸಂದರ್ಭ ಪ್ರಾಧಿಕಾರದ ಸದಸ್ಯರಾದ ನೀರಜ್‌ಚಂದ್ರ ಪಾಲ್ ಅಬ್ದುಲ್ ಜಲೀಲ್, ಸುಮನ್ ದಾಸ್, ಸಬಿತಾ ಮಿಸ್ಕಿತ್, ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್, ಸಹಾಯಕ ಕಾರ್ಯಪಾಲಕ ಅಭಿಯಂತರೆ ಅಶ್ವಿನಿ, ಸಹಾಯಕ ಅಭಿಯಂತರ ಅಕ್ಬರ್ ಬಾಷಾ, ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಮನೋಜ್ ಕುಮಾರ್, ಕಿರಣ್ ಕುಮಾರ್ ಕೋಡಿಕಲ್, ರಂಜಿನಿ ಕೋಟ್ಯಾನ್, ಬಿಜೆಪಿ ಮುಖಂಡರಾದ ಸತೇಶ್ ಕೊಂಡೆ, ಆಶಿತ್ ನೋಂಡ, ಹರಿಪ್ರಸಾದ್ ಶೆಟ್ಟಿ, ಉಮೇಶ್, ಸಂಜಿತ್ ಶೆಟ್ಟಿ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.