ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿ ಕುಲಪತಿಯಾಗಿ ಪ್ರೊ.ವಿಶ್ವನಾಥ್ ನೇಮಕ

ಪ್ರೊ. ವಿಶ್ವನಾಥ್
ಕೊಣಾಜೆ: ಬೆಂಗಳೂರಿನ ಡಾ.ಬಿ.ಆರ್ .ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಮಂಗಳೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ.ವಿಶ್ವನಾಥ್ ಅವರು ನೇಮಕಗೊಂಡಿದ್ದಾರೆ.
ಮಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಹಿರಿಯ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವಿಭಾಗದ ಅಧ್ಯಕ್ಷರಾಗಿ ಹಾಗೂ ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಶೈಕ್ಷಣಿಕ ಮಂಡಳಿ ಸದಸ್ಯರಾಗಿ ಸೇರಿದಂತೆ ಮಂಗಳೂರು ವಿಶ್ವವಿದ್ಯಾಲಯದ ಅನೇಕ ಆಡಳಿತಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕಳೆದ 34 ವರ್ಷಗಳಿಂದ ಮಂಗಳೂರು ವಿವಿಯಲ್ಲಿ ಬೋಧನೆ ಹಾಗೂ ಸಂಶೋಧನೆಯಲ್ಲಿ ನಿರತರಾಗಿದ್ದ ಇವರು ಕರ್ನಾಟಕದಲ್ಲಿ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಗುರುತಿಸಿದ್ದರು.
ಇವರ ಮಾರ್ಗದರ್ಶನದಲ್ಲಿ ಈಗಾಗಲೇ 4 ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಮಂದಿ ಪಿಎಚ್ ಡಿ ಪದವಿ ಪೂರ್ಣಗೊಳಿಸಿದ್ದಾರೆ. ಇವರ 150 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದು, ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಮ್ಮೆಳನಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಲ್ಲದೆ ಯುಜಿಸಿ , ಐಸಿಎಸ್ ಎಸ್ ಆರ್ ಪ್ರಾಯೋಜಿತ ಒಟ್ಟು 13 ಸಂಶೋಧನಾ ಯೋಜನೆಗಳನ್ನು ಹಾಗೂ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಭಾರತದ ವಿಶ್ವವಿದ್ಯಾಲಯಗಳು ಸೇರಿದಂತೆ ಪ್ಯಾರೀಸ್, ಫ್ರಾನ್ಸ್, ಪೋಲೆಂಡ್, ದುಬೈ ಸೇರಿದಂತೆ ಅನೇಕ ವಿವಿಗಳಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇವರಿಗೆ ಮಂಗಳೂರು ವಿವಿ ಉತ್ತಮ ಶಿಕ್ಷಕ ಪ್ರಶಸ್ತಿ, ರೂಲಾ( ಅರ್ಥಶಾಸ್ತ್ರದ ಉತ್ತಮ ವಿಜ್ಞಾನಿ ಪ್ರಶಸ್ತಿ) ಪ್ರಶಸ್ತಿಗಳು ಸಂದಿವೆ.
ಮಂಗಳೂರು ವಿವಿಯ ಡಾ.ಬಿ.ಆರ್ . ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು ಹಾಗೂ ಅನೇಕ ಕಾರ್ಯಕ್ರಮಗಳ ಸಂಘಟಕರಾಗಿ ಗುರುತಿಸಿದ್ದರು.