ದ.ಕ.ಜಿಲ್ಲೆಯ ಸೂಕ್ಷ್ಮ ಪ್ರಕರಣಗಳಲ್ಲಿ ಹೈಕೋರ್ಟ್ ಮುಂದೆ ವಾದಿಸಲು ಕಾನೂನು ಅಧಿಕಾರಿಗಳ ಸಮಿತಿ ರಚನೆ
► ರಾಜ್ಯ ಗೃಹ ಇಲಾಖೆಯ ಮಹತ್ವದ ಆದೇಶ

ಬೆಂಗಳೂರು, ಜು.5: ಮಂಗಳೂರು ನಗರ ಮತ್ತು ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುವ ಕೋಮು ಸೂಕ್ಷ್ಮ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಹೈಕೋರ್ಟ್ ಮುಂದೆ ಪ್ರತಿನಿಧಿಸಲು ಐವರನ್ನು ಒಳಗೊಂಡ ಕಾನೂನು ಅಧಿಕಾರಿಗಳ ಸಮಿತಿಯನ್ನು ರಚಿಸಿ ರಾಜ್ಯ ಗೃಹ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ದ.ಕ.ಜಿಲ್ಲೆಯಲ್ಲಿ ಕೋಮು ಉದ್ವಿಗ್ನತೆಯಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಂದೆ ಸರಕಾರವನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಾರ್ವಜನಿಕ ಅಭಿಯೋಜಕರು ಮತ್ತು ಹೆಚ್ಚುವರಿ ಅಡ್ವಕೇಟ್ ಜನರಲ್ ಅವರನ್ನು ನೇಮಿಸಲು ಕೋರಿಕೊಂಡಿದ್ದರು. ಅದರಂತೆ ಸರಕಾರವು ಜಿಲ್ಲೆಯಲ್ಲಿ ಉದ್ಭವಿಸುವ ಎಲ್ಲಾ ಸೂಕ್ಷ್ಮ ಪ್ರಕರಣಗಳ ಬಗ್ಗೆ ಹೈಕೋರ್ಟ್‌ನಲ್ಲಿ ವಾದಿಸಲು ಕಾನೂನು ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.
ಈ ಸಮಿತಿಗೆ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ, ಅಡಿಷನಲ್ ಅಡ್ವಕೇಟ್ ಜನರಲ್‌ಗಳಾದ ಶಾಹುಲ್ ಹಮೀದ್ ರೆಹ್ಮಾನ್ ಮತ್ತು ಪ್ರದೀಪ್ ಸಿ.ಎಸ್., ಅಡಿಷನಲ್ ಸ್ಟೇಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಗಳಾದ ಅಸ್ಮಾ ಕೌಸರ್ ಮತ್ತು ರಶ್ಮಿ ಜಾದವ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.