ಮಹಿಳಾಪರ ಚಿಂತನೆ ಜಾಗೃತಗೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ಜಯಂತಿ ಶೆಟ್ಟಿ

ಮಂಗಳೂರು: ಸಮಾಜದಲ್ಲಿ ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುವ ಪ್ರವ್ರತ್ತಿ ವ್ಯಾಪಕಗೊ ಳ್ಳುತ್ತಿದೆ. ಪ್ರತಿಗಾಮಿ ಶಕ್ತಿಗಳು ಮಹಿಳೆಯರನ್ನು ನಿಕೃಷ್ಠವಾಗಿ ಕಾಣುವ ಮೂಲಕ ಭೋಗದ ಸರಕನ್ನಾಗಿಸಿದೆ. ಇಂತಹ ಸಂದರ್ಭದಲ್ಲಿ ಮಹಿಳಾಪರ ಚಿಂತನೆಯನ್ನು ಬೆಳೆಸುವ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದು ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷ ಜಯಂತಿ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಅವರು ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಜರುಗಿದ ಜನವಾದಿ ಮಹಿಳಾ ಸಂಘಟನೆಯ ಉಳ್ಳಾಲ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲೆಯ ಹಿರಿಯ ಮಹಿಳಾ ಮುಖಂಡರಾದ ಪದ್ಮಾವತಿ ಶೆಟ್ಟಿಯವರು ಮಾತನಾಡಿ ರಾಜಕೀಯದಲ್ಲಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗುತ್ತಿಲ್ಲ. ಸಮಾನ ದುಡಿಮೆಗೆ ಸಮಾನ ವೇತನ ನೀಡುತ್ತಿಲ್ಲ. ಶೈಕ್ಷಣಿಕವಾಗಿ ಮಹಿಳೆಯರ ಪ್ರಮಾಣ ಜಾಸ್ತಿಯಿದ್ದರೂ ಯೋಗ್ಯ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಜೆಎಂಎಸ್ ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ,ಹಿರಿಯ ಮಹಿಳಾ ಮುಖಂಡ ಪದ್ಮಾವತಿ ಕುತ್ತಾರ್ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಮುಖಂಡರಾದ ವಿಲಾಸಿನಿ ತೊಕ್ಕೊಟು ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾಪರ ಚಿಂತಕಿ ಅರ್ಚನಾ ರಾಮಚಂದ್ರ,ಪಂಚಾಯತ್ ಸದಸ್ಯ ರಾಜೇಶ್ವರಿ, ಮಹಿಳಾ ನಾಯಕ ರಾದ ಪ್ರೀತಾ ರೋಹಿದಾಸ್, ಪ್ರಮೋದಿನಿಯವರು ಉಪಸ್ಥಿತರಿದ್ದರು.
ಸಮ್ಮೇಳನವು ಮಹಿಳೆಯರು ಅನುಭವಿಸುವ ಸಂಕಷ್ಟಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂಬರುವ ದಿನಗಳಲ್ಲಿ ಬಲಿಷ್ಠವಾದ ಮಹಿಳಾ ಚಳುವಳಿಯನ್ನು ಕಟ್ಟಲು ದೃಢ ತೀರ್ಮಾನ ಕೈಗೊಂಡಿತು. ಈ ಹಿನ್ನೆಲೆ ಯಲ್ಲಿ ನೂತನ ತಾಲೂಕು ಸಮಿತಿಯನ್ನು ಆಯ್ಕೆಗೊಳಿಸಿತು. ನೂತನ ಅಧ್ಯಕ್ಷ ಮಾಲತಿ ಸುಧೀರ್ ತೊಕ್ಕೋಟು, ಕಾರ್ಯದರ್ಶಿಯಾಗಿ ಪ್ರಮೋದಿನಿ ಕಲ್ಲಾಪು, ಖಜಾಂಚಿಯಾಗಿ ಅರ್ಚನಾ ರಾಮಚಂದ್ರ ಆಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಪದ್ಮಾವತಿ ಶೆಟ್ಟಿ, ರಾಜೇಶ್ವರಿ, ಶಾಲಿನಿ ಪೂಜಾರಿ, ರತ್ನಮಾಲಾ, ಉಮಾವತಿ, ವಿನೋದಾ ಅಸೈಗೋಳಿ ಹಾಗೂ ಜತೆಕಾರ್ಯದರ್ಶಿಗಳಾಗಿ ಪ್ರೀತಾ ರೋಹಿದಾಸ್, ವಿಲಾಸಿನಿ, ಕಮರುನ್ನೀಸಾ, ಗುಣವತಿ, ಗುಲಾಬಿ ಅವರನ್ನು ಆರಿಸಲಾಯಿತು. 16 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.