ಮಂಗಳೂರು: ವಿಶಿಷ್ಟ ರೀತಿಯಲ್ಲಿ ಮಕ್ಕಳ ಹುಟ್ಟು ಹಬ್ಬ ಆಚರಣೆ

ಮಂಗಳೂರು, ಜು.6: ರೇಷ್ಮಾ-ಲಕ್ಷ್ಮೀ ಕಾಂತ್ ದಂಪತಿಯ ಮಕ್ಕಳಾದ ಕ್ಷೀರ್ಷಳ 1ನೇ ಹಾಗೂ ಮೋಕ್ಷಳ 10ನೇ ಜನ್ಮ ದಿನದ ಆಚರಣೆ ಅರೋಗ್ಯ ಸ್ನೇಹಿಯಾಗಿ, ಪರಿಸರ ಸ್ನೇಹಿಯಾಗಿ ಕದ್ರಿಯ ಲಯನ್ಸ್ ಅಶೋಕ ಸಭಾ ಭವನದಲ್ಲಿ ನಡೆಯಿತು.
ಮೈದಾ, ಸಕ್ಕರೆಯಿಂದ ತಯಾರಿಸಿದ ಕೇಕ್ ಕಟ್ ಮಾಡುವ ಬದಲು ಅರೋಗ್ಯಭರಿತ ಹಣ್ಣು, ಒಣಹಣ್ಣು, ಒಣ ಬೀಜ, ಸೊಪ್ಪು ಹೀಗೆ ಅರೋಗ್ಯಭರಿತ 14 ಅಕ್ಷರಗಳನ್ನು ಹಾಳೆ ತಟ್ಟೆಯ ಮೇಲೆ ಬರೆದು 14 ಮಕ್ಕಳು ಒಬ್ಬೊಬ್ಬರಾಗಿ ಪಾತ್ರೆಗೆ ಹಾಕುವ (ಒಟ್ಟು ಮಾಡುವ) ಮೂಲಕ ಜನ್ಮ ದಿನದ ಆಚರಣೆ ಮಾಡಿದರು.
ತೆಂಗಿನಗರಿ, ನೈಸರ್ಗಿಕ ಹೂವುಗಳಿಂದ ವೇದಿಕೆ ಸಿಂಗಾರಿಸಲಾಗಿತ್ತು. ಬೈಹುಲ್ಲಿನ ಛಾವಣಿದ್ವಾರವು ಅತಿಥಿಗಳನ್ನು ಎದುರುಗೊಳ್ಳುತ್ತಿತ್ತು. ಸಾಮಾನ್ಯವಾಗಿ ಸಮಾರಂಭಗಳಲ್ಲಿ ಬಳಸುವ ನೀರಿನ ಬಾಟಲಿ, ಪೇಪರ್ ಕಪ್, ತಟ್ಟೆ, ಬಲೂನ್ ಪ್ಲಾಸ್ಟಿಕ್ ಚಮಚ, ಟಿಶ್ಯೂ ಪೇಪರ್ ಇಲ್ಲಿ ಎಲ್ಲೂ ಬಳಕೆಯಾಗಿಲ್ಲ.
ಸಮಾರಂಭ ಮುಗಿದ ನಂತರ ರಾಶಿ ತ್ಯಾಜ್ಯ ಪರಿಸರ ಸೇರುವುದು ಸಾಮಾನ್ಯ ಆದರೆ ಈ ಜನ್ಮ ದಿನದ ಆಚರಣೆಯಲ್ಲಿ ಶೂನ್ಯ ತ್ಯಾಜ್ಯಕ್ಕೆ ಒತ್ತು ಕೊಡಲಾಗಿತ್ತು. ಪರಿಸರ ಮಾಲಿನ್ಯ ಮತ್ತು ಅನಾರೋಗ್ಯಕರ ಆಹಾರ ಶೈಲಿಯೇ ಇಂದು ನಮ್ಮನ್ನು ಕಾಡುತ್ತಿರುವ ಖಾಯಿಲೆಗಳಿಗೆ ಕಾರಣ ಎಂಬುದನ್ನು ಮಕ್ಕಳ ಪೋಷಕರಾದ ರೇಷ್ಮಾ-ಲಕ್ಷ್ಮೀ ಕಾಂತ್ ದಂಪತಿ ಈ ಜನ್ಮ ದಿನದ ಆಚರಣೆಯಲ್ಲಿ ತಿಳಿಸಲು ಪ್ರಯತ್ನಿಸಿದ್ದಾರೆ.







