ಹಳೆ ಬಂದರಿನಲ್ಲಿ ಕಾರ್ಮಿಕರ ಮುಷ್ಕರ

ಮಂಗಳೂರು: ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ಸಂಹಿತೆ ಜಾರಿಗೊಳಿಸುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಳೆ ಬಂದರು ಸಗಟು ಮಾರು ಕಟ್ಟೆಯ ಕಾರ್ಮಿಕರು ಬುಧವಾರ ಮುಷ್ಕರ ನಡೆಸಿದರು. ಆ ಹಿನ್ನೆಲೆಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ ಎಂದು ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.
ಹಳೆ ಬಂದರಿನ ಕಿರಾಣ, ಅಡಿಕೆ, ಒಣಮೀನು, ಸಾರಿಗೆ ವಿಭಾಗದ ಕಾರ್ಮಿಕರು, ಸರಕು ಸಾಗಾಟದ ಲಾರಿ ಚಾಲಕರು ಮುಷ್ಕರದಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದ್ದಾರೆ. ಕಾರ್ಮಿಕರು ಪೋರ್ಟ್ ರಸ್ತೆ, ಜೆ.ಎಂ. ರಸ್ತೆ, ವರ್ತಕ ವಿಳಾಸ, ಚೇಂಬರ್ ರಸ್ತೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿದರು.
ಬಂದರು ಶ್ರಮಿಕರ ಸಂಘದ ಮುಖಂಡರಾದ ಫಾರೂಕ್ ಉಳ್ಳಾಲಬೈಲ್, ಲೋಕೇಶ್ ಶೆಟ್ಟಿ, ಮಜೀದ್ ಉಳ್ಳಾಲ, ಮೋಹನ, ಹರೀಶ್ ಕೆರೆಬೈಲ್, ಸಿದ್ದೀಕ್ ಬೆಂಗ್ರೆ, ಕಾಜ ಮೊಹಿಯುದ್ದೀನ್, ಪದ್ಮನಾಭ, ಪ್ರಭಾಕರ, ಸಿರಾಜ್, ಇಕ್ಬಾಲ್, ಬಸವ, ಅಬ್ದುಲ್ ಖಾದರ್ ಬಜಾಲ್, ಅಬ್ಬಾಸ್ ಮತ್ತೊತರರು ಉಪಸ್ಥಿತರಿದ್ದರು.





