ಎರ್ಮಾಳು ಮೂಡಬೆಟ್ಟುವಿನಲ್ಲಿ ಗದ್ದೆ ನೋಟ, ಕೃಷಿ ಪಾಠ

ಪಡುಬಿದ್ರಿ: ಎರ್ಮಾಳು ಮೂಡಬೆಟ್ಟು ಬರ್ಪಾಣಿ ದಿ. ಜಗನ್ನಾಥ ಶೆಟ್ಟಿಯವರ ಗೆದ್ದೆಯಲ್ಲಿ ಅದಮಾರಿನ ಆದರ್ಶ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುದರಂಗಡಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆ ನೋಟ- ಕೃಷಿ ಪಾಠ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಗದ್ದೆಯಲ್ಲಿ ನಲಿದಾಡಿದರು. ಕೆಸರುಗದ್ದೆಯಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಶಿಕ್ಷಕ ವೈ.ಎಸ್ ಸುದರ್ಶನ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ ಮಾತನಾಡಿ, ಎಳವೆಯಲ್ಲಿಯೇ ಮಕ್ಕಳಿಗೆ ಕೃಷಿ ಪಾಠ ನೀಡುವುದು ಸಮಾಜಕ್ಕೆ ಉತ್ತಮ ಸಂದೇಶವಾಗಿದೆ. ಮಣ್ಣಿನ ಸುವಾಸನೆಯನ್ನು ತಿಳಿಯಬೇಕಾದರೆ, ಸುಡು ಬಿಸಿಲಿನಿಂದ ಬೆಂದ ಭೂಮಿಗೆ ಮಳೆ ನೀರು ಬಿದ್ದಾಗ ಅದರಿಂದ ಬರುವಂತಹ ಸುವಾಸನೆಯನ್ನು ಗ್ರಹಿಸಿದಾಗ ಮಾತ್ರ ಭೂಮಿಯ ಮಹತ್ವ ತಿಳಿಯುತ್ತದೆ. ಅದು ಕೃಷಿಕರನ್ನು ಪುಲಕಿತಗೊಳ್ಳುವಂತೆ ಮಾಡುತ್ತದೆ ಎಂದರು.
ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನೀತಾ ಡಿಸೋಜ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂತಹ ಯಾವುದೇ ಚಟುವಟಿಕೆಗಳನ್ನು ಭಾಗವಹಿಸಿ ರಲಿಲ್ಲ. ಈ ಬಾರಿ ಆದರ್ಶ ಯುವಕ ಮಂಡಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಇದರಿಂದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ.
ಕಾರ್ಯಕ್ರಮವನ್ನು ಆಯೋಜಿಸಿಅವರು ಮಾತನಾಡಿ, ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸತತವಾಗಿ 11 ವರ್ಷಗಳಿಂದ ಗದ್ದೆ ನೋಟ ಕೃಷಿ ಪಾಠ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಅಂತೆಯೇ ಈ ಬಾರಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು ಎಂದರು.
ಈ ಸಂದರ್ಭದಲ್ಲಿಆದರ್ಶ ಯುವಕ ಸಂಘದ ಕಾರ್ಯದರ್ಶಿ ಗಣೇಶ್, ಶಾಲೆಯ ದೈಹಿಕ ಶಿಕ್ಷಕರಾದ ಸತೀಶ್ ಅಂಚನ್, ಆದರ್ಶ ಯುವತಿ ಮಂಡಳದ ಅಧ್ಯಕ್ಷೆ ಸುಜಾತ ಶೆಟ್ಟಿ, ಸಂತೋಷ್ ಶೆಟ್ಟಿ ಬರ್ಪಾಣಿ ಮತ್ತು ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







